ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಮಾರ್ಕಂಡೇಯ ನದಿ ಒಳಹರಿವು ಹೆಚ್ಚಾಗಿದ್ದು, ಶಿರೂರ ಗ್ರಾಮದ ಬಳಿಯಿರುವ ಡ್ಯಾಮ್ನಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ಡ್ಯಾಮ್ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಕೆ. ಯಂಟ್ಟದ್ದಿನವರ ಹೇಳಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮಾರ್ಕಂಡೇಯ ಡ್ಯಾಮ್ಗೆ 5,200 ಕ್ಯೂಸೆಕ್ ನಷ್ಟು ಒಳಹರಿವು ಬರುತ್ತಿದ್ದು, ಇವತ್ತಿನ ಗರಿಷ್ಠಮಟ್ಟ 704 ಮೀಟರ್ ಇದೆ. ಇನ್ನು ಕೇವಲ ಒಂದೂವರೆ ಮೀಟರ್ ನೀರು ಬಂದ್ರೆ ಡ್ಯಾಮ್ ಫುಲ್ ಆಗಲಿದೆ. ಕ್ರಸ್ಟ್ ಗೇಟ್ ಬಂದ್ ಮಾಡಿದ ಒಂದೇ ದಿನದಲ್ಲಿ ಡ್ಯಾಮ್ ಪೂರ್ತಿಯಾಗಿ ಭರ್ತಿ ಆಗಲಿದೆ. ಹೀಗಾಗಿ ಬರುವ ಮಳೆಗಾಲದ ದಿನಗಳನ್ನು ಹಾಗೂ ಡ್ಯಾಮ್ನ ಸುರಕ್ಷತೆ ದೃಷ್ಟಿಯಿಂದ 500 ಕ್ಯೂಸೆಕ್ ಒಳಹರಿವಿನ ನೀರನ್ನು ಮಾತ್ರ ಇಟ್ಟುಕೊಂಡು ಉಳಿದೆಲ್ಲಾ ನೀರನ್ನು ಹೊರಗೆ ಬಿಡಲಾಗುತ್ತಿದೆ ಎಂದರು.
![ಮಾರ್ಕಂಡೇಯ ಡ್ಯಾಮ್ನಿಂದ 5 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ](https://etvbharatimages.akamaized.net/etvbharat/prod-images/kn-bgm-04-09-marakndeay-dam-vsl-ka10029_09082020181915_0908f_02060_631.jpg)
ಮಾರ್ಕಂಡೇಯ ಡ್ಯಾಮ್ನ ಮಾಹಿತಿ:
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಬಳಿಯಿರುವ ಈ ಮಾರ್ಕಂಡೇಯ ಡ್ಯಾಮ್ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರಾವರಿ ಯೋಜನೆಗೆ ನಿರ್ಮಿಸಲಾಗಿದೆ. ಈ ಡ್ಯಾಮ್ 3.696 ಟಿಎಂಸಿ ನೀರಿನ ಗರಿಷ್ಠ ಸಾಮರ್ಥ್ಯ ಹೊಂದಿದ್ದು, 432 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಲಾನಯನ ಪ್ರದೇಶವಿದೆ. ಇನ್ನು 475 ಮೀಟರ್ ಉದ್ದವಿರುವ ಈ ಮಾರ್ಕಂಡೇಯ ಡ್ಯಾಮ್ 39.10ಮೀಟರ್ ಎತ್ತರದಲ್ಲಿದ್ದು, 696 ಮೀಟರ್ ಸಾಮರ್ಥ್ಯದ 6 ಕ್ರಸ್ಟ್ ಗೇಟ್ ಗಳನ್ನು ಹೊಂದಿದೆ.
ಈ ಡ್ಯಾಮ್ ನೀರನ್ನು ನೀರಾವರಿ ಯೋಜನೆಗಾಗಿ 3.220ಟಿಎಂಸಿ, 0.295 ಕುಡಿಯುವುದಕ್ಕಾಗಿ ಬಳಸಲಾಗುತ್ತದೆ. ರೈತರಿಗೆ ಅನುಕೂಲವಾಗುವಂತೆ ಹೆಚ್ಚಾಗಿ ನೀರಾವರಿ ಯೋಜನೆಗೆ ಬಳಸಿಕೊಳ್ಳಲಾಗಿದೆ. ಮಾರ್ಕಂಡೇಯ ಡ್ಯಾಮ್ ನ ವ್ಯಾಪ್ತಿಯಲ್ಲಿ 11142.73 ಹೆಕ್ಟೇರ್ ಭೂಪ್ರದೇಶ ಹಾಗೂ 7 ಗ್ರಾಮಗಳು ಮುಳುಗಡೆ ವ್ಯಾಪ್ತಿಗೆ ಬರುತ್ತವೆ.