ಬೆಳಗಾವಿ: ಇವತ್ತಿನ ದಿನದಲ್ಲಿ ಪೈಲಟ್, ಇಂಡಿಯನ್ ಆರ್ಮಿ, ನೇವಿ ಸೇರಿದಂತೆ ಎಲ್ಲ ಕಡೆ ಮಹಿಳಾ ಸೈನ್ಯವನ್ನು ಸಜ್ಜುಗೊಳಿಸಲಾಗುತ್ತಿದೆ. ವೀರರಾಣಿ ಬೆಳವಡಿ ಮಲ್ಲಮ್ಮನ ಇತಿಹಾಸ ಇಡೀ ಜಗತ್ತಿಗೆ ಗೊತ್ತಾಗಲು ದೇಶದ ಯಾವುದಾದರೂ ಒಂದು ಮಹಿಳಾ ಸೈನ್ಯಕ್ಕೆ ಬೆಳವಡಿ ಮಲ್ಲಮ್ಮಜಿ ಹೆಸರಿಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಅಂದಿನ ಕಾಲದಲ್ಲಿ ಬೆಳವಡಿ ಮಲ್ಲಮ್ಮ, ವೀರರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅನೇಕರು ರಾಜ ಮನೆತನದಲ್ಲಿ ಹುಟ್ಟಿ ಆರಾಮವಾಗಿ ಜೀವನ ಸಾಗಿಸಬಹುದಿತ್ತು.
ಆದರೆ, ಬ್ರಿಟಿಷರ ಗುಲಾಮಗಿರಿಯಿಂದ ತತ್ತರಿಸಿದ ಈ ನಾಡಿನ ಪ್ರಜೆಗಳಿಗೋಸ್ಕರ ಬೆಳವಡಿ ಮಲ್ಲಮ್ಮ ಸೇರಿದಂತೆ ಅನೇಕ ಜನರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅಂತಹವರನ್ನು ಇವತ್ತಿನ ಹೆಣ್ಣುಮಕ್ಕಳು ಆದರ್ಶವಾಗಿಟ್ಟಕೊಳ್ಳಬೇಕು. ಸುಮಾರು ವರ್ಷಗಳ ಹಿಂದೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಶಸ್ತ್ರಾಸ್ತ್ರ ತರಬೇತಿ ನೀಡಿ ಸೈನ್ಯ ಕಟ್ಟಿದ ಈ ನಾಡಿನ ಮೊದಲ ಮಹಿಳೆ ಬೆಳವಡಿ ಮಲ್ಲಮ್ಮ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ವೈಯಕ್ತಿಕ ಹಿತಕ್ಕಿಂತ ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರನ್ನು ನಾವು ಜೀವನ ಪೂರ್ತಿ ನೆನಪು ಇಟ್ಟಿಕೊಳ್ಳುತ್ತೇವೆ. ಆದ್ದರಿಂದ ನಾವು ಯಾವ ರೀತಿ ಬದುಕಬೇಕು ಮತ್ತು ಶ್ರಮಿಸಬೇಕು ಅಂತಾ ಕಲಿಯಬೇಕಾಗಿದೆ ಎಂದರು. ಈ ನಾಡಿಗೋಸ್ಕರ ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಈ ನೆಲಕ್ಕೆ ಮುಡಿಪಾಗಿಟ್ಟಿದ್ದ ವೀರರಾಣಿ ಬೆಳವಡಿ ಮಲ್ಲಮ್ಮನ ಹೆಸರನ್ನು ದೇಶದ ಯಾವುದಾದರೂ ಸೈನ್ಯಕ್ಕೆ ಹೆಸರಿಡಲು ನಾನು ಕೂಡ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ವರ್ಷದೊಳಗಾಗಿ ಬೆಳವಡಿಯಲ್ಲಿ ಮ್ಯೂಸಿಯಂ ಮಾಡುತ್ತೇವೆ. ವೀರರಾಣಿ ಬೆಳವಡಿ ಮಲ್ಲಮ್ಮನ ಮೂರ್ತಿ ಪ್ರತಿಷ್ಠಾಪನೆಗೆ ಕರ್ನಾಟಕ ಸರ್ಕಾರವು 50 ಲಕ್ಷ ರೂಪಾಯಿ ನೀಡಿರುವುದಾಗಿ ಇವರು ಹೇಳಿದರು. ಬೆಳವಡಿ ಸಂಸ್ಥಾನದ ರಾಜ ಗುರುಗಳು ಷ.ಬ್ರ. ಶಿವಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮತ್ತು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರಿಗೆ ಬೆಳವಡಿ ಮಲ್ಲಮ್ಮ ಪ್ರಶಸ್ತಿ ನೀಡಿ, ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮತ್ತಿತರರು ಉಪಸ್ಥಿತರಿದ್ದರು.