ಬೆಳಗಾವಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೆಳಗಾವಿ ಕುವೆಂಪು ನಗರದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯನ್ನು ದೋಷಮುಕ್ತಗೊಳಿಸಿ ಹೈಕೋರ್ಟ್ ಪೀಠ ಮಹತ್ವದ ತೀರ್ಪು ನೀಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಪಿ ಪ್ರವೀಣ್ ಭಟ್ ಪರ ವಕೀಲ ಪ್ರವೀಣ್ ಕರೋಶಿ, "2015ರಲ್ಲಿ ಬೆಳಗಾವಿಯ ಕುವೆಂಪು ನಗರದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಪ್ರವೀಣ್ ಭಟ್‌ನನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದರು. ಬಳಿಕ ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ತನಿಖೆಯ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಸಾಂದರ್ಭಿಕ ಸಾಕ್ಷ್ಯ ಪರಿಗಣಿಸಿ ಬೆಳಗಾವಿ ಕೋರ್ಟ್ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಈ ತೀರ್ಪಿನ ವಿರುದ್ಧ ನಾವು ಹೈಕೋರ್ಟ್‌ಗೆ ಅಪೀಲು ಸಲ್ಲಿಸಿದ್ದೆವು.
ಇಂದು ತುಂಬಾ ಗಂಭೀರವಾದ ಈ ಪ್ರಕರಣದಲ್ಲಿ ಧಾರವಾಡ ಹೈಕೋರ್ಟ್ ದ್ವಿಸದಸ್ಯ ಪೀಠವು ಮಹತ್ವದ ತೀರ್ಪು ನೀಡಿದೆ. ದೂರುದಾರರಿಂದ ಸಮರ್ಥನೀಯ ಹಾಗೂ ಪ್ರತ್ಯಕ್ಷ ಸಾಕ್ಷ್ಯ ಒದಗಿಸಲು ಆಗಿಲ್ಲ. ನನ್ನ ಕಕ್ಷಿದಾರ ಪ್ರವೀಣ ಭಟ್ ಮಂಗಳವಾರ ಬಿಡುಗಡೆ ಆಗಿದ್ದಾರೆ. ಕೊಲೆ ನಡೆದ ಜಾಗದಲ್ಲಿ ಕೊಲೆಯಾದವರ ಜತೆಗೆ ಆರೋಪಿಯ ರಕ್ತದ ಕಲೆಗಳು, ಚಾಕುವಿನ ಮೇಲೆ ಅವರ ಬೆರಳಿನ ಗುರುತು, ನೆಲದ ಮೇಲೆ ಹೆಜ್ಜೆ ಗುರುತು ಸಿಕ್ಕಿವೆ ಎಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಬೆಳಗಾವಿ ತ್ರಿವಳಿ ಕೊಲೆ ಪ್ರಕರಣ: ಪ್ರವೀಣ್ ಭಟ್ ನಿರ್ದೋಷಿ.. ಹೈಕೋರ್ಟ್ ಆದೇಶ
ಆರೋಪಿ ಪ್ರವೀಣ ಹಾಗೂ ಗೃಹಿಣಿ ರೀನಾ ಅವರಿಗೆ ಕೊನೆಯದಾಗಿ ಮೊಬೈಲ್ ಕರೆ ಮಾಡಿ ಮಾತನಾಡಿದ್ದಾರೆ ಎನ್ನುವುದನ್ನೂ ಸಾಕ್ಷ್ಯ ಮಾಡಲಾಗಿತ್ತು. ಇದಿಷ್ಟು ಸಾಕ್ಷ್ಯಾಧಾರ ಪರಿಗಣಿಸಿ ಜಿಲ್ಲಾ ನ್ಯಾಯಾಲಯ ಜೀವಾವಧಿ ನೀಡಿತ್ತು. ಆದರೆ, ಆರೋಪಿ ಮೇಲಿನ ಸಾಕ್ಷ್ಯಾಧಾರಗಳು ಒಂದಕ್ಕೊಂದು ತಾಳೆ ಆಗಲಿಲ್ಲ. ಈ ಬಗ್ಗೆ ಹೈಕೋರ್ಟ್ನಲ್ಲಿ ಸಮರ್ಥನೀಯ ವಾದ ಮಂಡಿಸಲಾಯಿತು. ಹಾಗಾಗಿ, ಹೈಕೋರ್ಟ್ ಪ್ರತ್ಯಕ್ಷ ಸಾಕ್ಷ್ಯಾಧಾರ ಕೇಳಿತು. ದೊರೆಯದ ಕಾರಣ ನನ್ನ ಕಕ್ಷಿದಾರನ ಬಿಡುಗಡೆಗೆ ಆದೇಶಿಸಿದೆ" ಎಂದು ವಿವರಿಸಿದರು.