ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಬೆಳಗಾವಿಯಲ್ಲಿ 438 ಕೋಟಿ ರೂ. ವೆಚ್ಚದಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ (ಅ.11ಕ್ಕೆ) ನಿನ್ನೆಗೆ ಹತ್ತು ವರ್ಷ ಪೂರ್ಣಗೊಂಡಿದೆ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಿಗಾಗಿಲಿ, ಸೌಧಕ್ಕಾಗಲಿ ಇಂದಿಗೂ ಸುವರ್ಣ ಕಾಲ ಕೂಡಿ ಬಂದಿಲ್ಲ. ಸುವರ್ಣ ಸೌಧ ಕೇವಲ ಕಟ್ಟಡವಾಗಿಯೇ ಉಳಿದುಕೊಂಡಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಬೆಳಗಾವಿ ತಾಲೂಕಿನ ಹೊರವಲಯದಲ್ಲಿರುವ ಹಲಗಾ-ಬಸ್ತವಾಡ ಗ್ರಾಮದಲ್ಲಿ ನಿರ್ಮಿಸಿರುವ ಸುವರ್ಣ ವಿಧಾನಸೌಧವನ್ನು 2012 ಅಕ್ಟೋಬರ್ 11 ರಂದು ಉದ್ಘಾಟಿಸಲಾಗಿದ್ದು, ಇದೀಗ ಹತ್ತು ವರ್ಷ ಕಳೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 60,398 ಮೀಟರ್ ಸುತ್ತಳತೆಯ ವಿಶಾಲವಾದ ಕಟ್ಟಡ ನಿರ್ವಹಣೆಗೆ ರಾಜ್ಯ ಸರ್ಕಾರ ಪ್ರತಿ ವರ್ಷ 5-6 ಕೋಟಿ ರೂ. ಖರ್ಚು ಮಾಡುತ್ತಿದೆ. ಈವರೆಗೆ 70 ಕೋಟಿಗೂ ಹೆಚ್ಚು ಹಣ ಕೇವಲ ನಿರ್ವಹಣೆಗಾಗಿ ವ್ಯಯಿಸಿದೆ. ಆದ್ರೆ, ಇಷ್ಟು ಸುದೀರ್ಘ ವರ್ಷಗಳಲ್ಲಿ ಸೌಧದ ಬಳಕೆ, ಉತ್ತರ ಕರ್ನಾಟಕ, ಬೆಳಗಾವಿ ಜಿಲ್ಲೆಗೆ ಆಗಿರುವ ಉಪಯೋಗವನ್ನು ಮೆಲುಕು ಹಾಕಿದ್ರೆ ಎಲ್ಲವೂ ಶೂನ್ಯವಾಗಿದ್ದು, ಶಕ್ತಿ ಸೌಧ ಕೇವಲ ಕಟ್ಟಡವಾಗಿಯೇ ಉಳಿದುಕೊಂಡಿದೆ.
ಸರ್ಕಾರಗಳು ಶಕ್ತಿ ತುಂಬುವ ಕೆಲಸ ಮಾಡಲಿಲ್ಲ: ಉತ್ತರ ಕರ್ನಾಟಕ ಜನರ ಶಕ್ತಿ ಕೇಂದ್ರವಾಗಿದ್ದ ಸೌಧಕ್ಕೆ ಯಾವುದೇ ಸರ್ಕಾರಗಳು ಶಕ್ತಿ ತುಂಬುವ ಕೆಲಸ ಮಾಡಲಿಲ್ಲ. ಹತ್ತು ವರ್ಷದಲ್ಲಿ ಕೇವಲ 80 ದಿನಗಳ ಕಾಲ ಅಧಿವೇಶನಗಳು ನಡೆದಿವೆ. 438 ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಸೌಧ ವರ್ಷವಿಡೀ ಖಾಲಿ ಖಾಲಿಯಾಗಿಯೇ ಉಳಿಯುತ್ತಿದೆ. ಇದು ಕೇವಲ ಕಟ್ಟಡವಾಗಿಯೇ ಉಳಿದುಕೊಂಡಿದೆ.
ಇದನ್ನೂ ಓದಿ: ಸುವರ್ಣಸೌಧದಲ್ಲಿ ಮಾಹಿತಿ ಆಯೋಗದ ಬೆಳಗಾವಿ ಪೀಠ ಕಾರ್ಯಾರಂಭ
ಸುವರ್ಣ ಸೌಧದಲ್ಲಿ ಒಂದೇ ರಾಜ್ಯ ಮಟ್ಟದ ಕಚೇರಿ: ಸುವರ್ಣಸೌಧ ಕಚೇರಿಗೆ ರಾಜ್ಯ ಮಟ್ಟದ ಕಚೇರಿಗಳು ಸ್ಥಳಾಂತರ ಮಾಡುವಂತೆ ಕನ್ನಡಪರ, ರೈತಪರ ಹೋರಾಟಗಾರರು ಪ್ರತಿಭಟನೆ ಮಾಡಿದ್ರು ಯಾವುದೇ ಪ್ರಯೋಜನ ಆಗಿಲ್ಲ. ಅವರ ಪ್ರಯತ್ನಕ್ಕೆ ಸುವರ್ಣ ಸೌಧಕ್ಕೆ ಈವರೆಗೆ ಶಿಫ್ಟ್ ಆಗಿದ್ದು ಕೇವಲ ಒಂದೇ ಒಂದು ರಾಜ್ಯ ಮಟ್ಟದ ಕಚೇರಿ ಮಾತ್ರ. ಸದ್ಯಕ್ಕೆ ಸೌಧದಲ್ಲಿ ಬೆಳಗಾವಿ ಜಿಲ್ಲೆಯ ಜಿಲ್ಲಾ ಮಟ್ಟದ 22 ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದೆ. 10 ವರ್ಷದಲ್ಲಿ 8 ಅಧಿವೇಶನ ನಡೆಸಿರುವ ರಾಜ್ಯ ಸರ್ಕಾರಗಳು, ಒಂದು ಅಧಿವೇಶನವನ್ನು ಕೇವಲ 10 ದಿನಕ್ಕೆ ಮಾತ್ರ ಸಿಮೀತಗೊಳಿಸಿದ್ದವು.
ಇದನ್ನೂ ಓದಿ: ಬೆಳಗಾವಿ ಸುವರ್ಣಸೌಧಕ್ಕೆ ಶೀಘ್ರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಕಚೇರಿ ಸ್ಥಳಾಂತರ : ಕೆ.ಎಸ್ ಈಶ್ವರಪ್ಪ
ಒಟ್ಟಾರೆ, ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದ ಕನಸು ನನಸಾದಾಗ ಈ ಭಾಗದ ಕಷ್ಟಗಳು ಬಗೆಹರಿದವು ಎಂದು ಜನರು ಖುಷಿ ಪಟ್ಟಿದ್ದರು. ನಂತರದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುವುದಿರಲಿ ಅಧಿವೇಶನ ನಡೆಸುವುದೇ ಸರ್ಕಾರಗಳಿಗೆ ಭಾರವಾಗಿವೆ. ಸೌಧ ಇದೆ ಎನ್ನುವ ಕಾರಣಕ್ಕೆ ಆಗಾಗ ಕೆಲ ಸಚಿವರು ಸಭೆ ನಡೆಸಿ ಹೋಗುತ್ತಾರೆ. ಆದರೆ, ಇದುವರೆಗೆ ಯಾವುದೇ ಒಬ್ಬ ಸಚಿವರು ಸುವರ್ಣ ಸೌಧದಲ್ಲಿ ಕುಳಿತು ಜನರ ಸಮಸ್ಯೆ ಆಲಿಸುತ್ತಿಲ್ಲ ಎಂಬುದು ಈ ಭಾಗದ ಜನರ ಅಳಲು.
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ : ಲೈಟಿಂಗ್ಸ್ನಲ್ಲಿ ಕಂಗೊಳಿಸುತ್ತಿದೆ ಸು'ತ್ರಿ'ವರ್ಣಸೌಧ