ಬೆಳಗಾವಿ : ಮುಂದಿನ ವಾರ ಬೆಳಗಾವಿ ಅಧಿವೇಶನದಲ್ಲಿ ರಾಜಕೀಯ ಗುದ್ದಾಟದ ಕಾವು ಇನ್ನಷ್ಟು ಹೆಚ್ಚಲಿದೆ. ಮುಂದಿನ ವಾರ ಮತಾಂತರ ವಿಧೇಯಕದ ಗದ್ದಲ ಜೊತೆಗೆ ಬಿಟ್ ಕಾಯಿನ್, 40 ಪರ್ಸೆಂಟ್ ಕಮೀಷನ್ ಆರೋಪ ಸಂಬಂಧ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಮಧ್ಯೆ ಜಿದ್ದಾಜಿದ್ದಿನ ಮಾತಿನ ಕದನ ನಡೆಯುವ ಸಾಧ್ಯತೆ ಇದೆ.
ಬೆಳಗಾವಿ ಅಧಿವೇಶನದ ಮೊದಲ ವಾರ ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿತ್ತು. ಮುಂದಿನ ವಾರದಲ್ಲಿ ಕಲಾಪ ಕಲಹ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ಇದೆ. ಮುಂದಿನ ವಾರ ಪ್ರಮುಖವಾಗಿ ಮತಾಂತರ ನಿಷೇಧ ವಿಧೇಯಕದ ಗದ್ದಲ ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ವಿಧೇಯಕ ಮಂಡನೆಗೆ ಈಗಾಗಲೇ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇತ್ತ ಪ್ರತಿಪಕ್ಷಗಳು ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿವೆ. ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ.
ಸೋಮವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ಅಸ್ತು ಸಿಗುವ ಸಾಧ್ಯತೆ ಇದೆ. ಬಳಿಕ ಸದನದಲ್ಲಿ ಮಂಡನೆಯಾಗಲಿದೆ. ಈ ವೇಳೆ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದ್ದು, ವಾಕ್ಸಮರ ಏರ್ಪಡಲಿದೆ.
ಇತ್ತ ಶಾಸಕರಿಗೆ ಕಾಂಗ್ರೆಸ್ ವಿಪ್ ಜಾರಿ ಮಾಡಿದೆ. ಮುಂದಿನ ವಾರ ಎಲ್ಲಾ ಶಾಸಕರು ಕಡ್ಡಾಯ ಹಾಜರಿರುವಂತೆ ಸೂಚಿಸಿದೆ. ಹೀಗಾಗಿ, ಬಿಜೆಪಿ ಸರ್ಕಾರವನ್ನು ಮಣಿಸಲು ಕಾಂಗ್ರೆಸ್ ಎಲ್ಲಾ ತಯಾರಿ ಮಾಡಿದೆ. ಬಿಟ್ ಕಾಯಿನ್ ಬಗ್ಗೆ ಪ್ರಸ್ತಾಪ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ.
ಬಿಟ್ ಕಾಯಿನ್ ಮೂಲಕ ಆಡಳಿತ ಪಕ್ಷವನ್ನು ಹಣಿಯಲು ಮುಂದಾಗಿದೆ. ಇತ್ತ ಸರ್ಕಾರವೂ ಬಿಟ್ ಕಾಯಿನ್ ಸಂಬಂಧ ಕಾಂಗ್ರೆಸ್ ವಿರುದ್ಧ ಮುಗಿಬೀಳಲು ಸಿದ್ಧವಾಗಿದೆ. ಹೀಗಾಗಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸದನದಲ್ಲಿ ಕಲಹ ಇನ್ನಷ್ಟು ಹೆಚ್ಚಾಗಲಿದೆ. ಇದರ ಜೊತೆ 40 ಪರ್ಸೆಂಟ್ ಕಮೀಷನ್ ಆರೋಪದ ಬಗ್ಗೆಯೂ ಮುಂದಿನ ವಾರ ದನಿ ಎತ್ತಲು ಕಾಂಗ್ರೆಸ್ ನಿರ್ಧರಿಸಿದೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ : ಕರ್ನಾಟಕ ಪತ್ರಕರ್ತನಿಗೆ ಜೈಲು ಶಿಕ್ಷೆ ಖಾಯಂಗೊಳಿಸಿದ ಸುಪ್ರೀಂಕೋರ್ಟ್