ಬೆಳಗಾವಿ : ಜಿಲ್ಲೆಯಲ್ಲಿರುವ ಹಿಂಡಲಗಾ ಕೇಂದ್ರ ಕಾರಾಗೃಹ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸ್ಫೋಟಿಸುವುದಾಗಿ ಹಾಗೂ ಡಿಐಜಿಪಿ ಟಿ.ಪಿ.ಶೇಷ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಗುರುತು ಪತ್ತೆ ಹಚ್ಚುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಕ್ಕೇರಿಯ ಕಿರಣ ಮೋಷಿ (48) ಬೆದರಿಕೆ ಕರೆ ಮಾಡಿದ್ದ ಆರೋಪಿ. ತನ್ನ ಪತ್ನಿಯ ಹೆಸರಿನಲ್ಲಿರುವ ಸೀಮ್‌ನಿಂದ ಬಂದಿಖಾನೆ ಇಲಾಖೆಯ ಉತ್ತರ ವಲಯದ ಡಿಐಜಿಪಿ ಟಿ ಪಿ ಶೇಷ ಅವರಿಗೆ ಭಾನುವಾರ ಮಧ್ಯಾಹ್ನ ಕರೆ ಮಾಡಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು, ಸದ್ಯ ಆರೋಪಿಯನ್ನು ಆ ತಂಡ ಪತ್ತೆ ಹಚ್ಚಿದೆ. ಆರೋಪಿ ಕಿರಣ ಮೋಷಿ ಈ ಹಿಂದೆ 2022 ರಲ್ಲಿ ಬೇರೆಯವರ ಅಕೌಂಟ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಆ ವೇಳೆ ಸೈಬರ್ ಕ್ರೈಮ್ ಆರೋಪದಡಿ 10 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿದ್ದನು. ಅಲ್ಲದೇ, ಮೋಜು-ಮಸ್ತಿ ಹಾಗೂ ದಿಢೀರ್ ಜನಪ್ರಿಯವಾಗಬೇಕು ಎಂಬ ದುರುದ್ದೇಶದಿಂದ ಈ ರೀತಿ ಒಂದಿಲ್ಲೊಂದು ಹುಚ್ಚಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಸದ್ಯ ಆರೋಪಿ ಕಿರಣ್ ಮೋಷಿ ಬೆಂಗಳೂರಲ್ಲಿ ತಲೆಮರೆಸಿಕೊಂಡಿದ್ದಾನೆ. ನಮ್ಮ ಪೊಲೀಸರ ತಂಡವನ್ನು ಬೆಂಗಳೂರಿಗೆ ಕಳುಹಿಸಲಾಗಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಿ ಬೆಳಗಾವಿಗೆ ಕರೆ ತರುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಬೆದರಿಕೆ ಕರೆ : ದೂರು ದಾಖಲಿಸಿದ ಬಂಧಿಖಾನೆ ಡಿಐಜಿಪಿ
ಪ್ರಕರಣದ ಹಿನ್ನೆಲೆ : ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ, ಬೆಂಗಳೂರು ಕಾರಾಗೃಹ ಮತ್ತು ನನ್ನ ವಸತಿ ಗೃಹದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿ.ಪಿ. ಶೇಷ ಅವರು ಅಕ್ಟೋಬರ್ 9 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ : ಕರ್ನಾಟಕಕ್ಕೆ ಬಂದರೆ ಪರಿಣಾಮ ಎದುರಿಸಬೇಕಾಗುತ್ತದೆ : ರಾಕೇಶ್ ಟಿಕಾಯಿತ್ಗೆ ಕೊಲೆ ಬೆದರಿಕೆ!
ಮೂರು ಪ್ರತ್ಯೇಕ ಮೊಬೈಲ್ ಸಂಖ್ಯೆಗಳಿಂದ ಭಾನುವಾರ (8 ಅಕ್ಟೋಬರ್) ಕರೆ ಮಾಡಿದ ವ್ಯಕ್ತಿಯೋರ್ವ ಹಿಂಡಲಗಾ ಕೇಂದ್ರ ಕಾರಾಗೃಹದ ಹಿರಿಯ ವೀಕ್ಷಕರಾದ ಜಗದೀಶ ಗಸ್ತಿ, ಎಸ್.ಎಂ. ಗೋಟೆ ಅವರ ಪರಿಚಿತನೆಂದು ಹೇಳಿ, ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗಲಭೆ ಸೃಷ್ಟಿಸುತ್ತೇನೆ ಮತ್ತು ನನ್ನ ಮೇಲೆ ಹಲ್ಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾನೆ ಅಂತಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ : ಶಾಸಕ ಟಿಬಿ ಜಯಚಂದ್ರಗೆ ಬೆದರಿಕೆ ಕರೆ.. ಸಚಿವ ಎಚ್ಕೆ ಪಾಟೀಲ ಹೇಳಿದ್ದೇನು?