ಬೆಳಗಾವಿ : 18 ಶಾಸಕರು, ಇಬ್ಬರು ಸಂಸದರು, ಓರ್ವ ರಾಜ್ಯಸಭಾ ಸದಸ್ಯ, ಐವರು ವಿಧಾನಪರಿಷತ್ ಸದಸ್ಯರು ಹಾಗೂ ಇಬ್ಬರು ಸಚಿವರನ್ನು ಒಳಗೊಂಡಿರುವ ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿ ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳನ್ನು ಹೊಂದಿದೆ. ಪ್ರತಿ ಸರ್ಕಾರದಲ್ಲೂ ತನ್ನದೇ ಆದ ಪ್ರಭಾವ ಮತ್ತು ವರ್ಚಸ್ಸು ಹೊಂದಿರುವ ಜಿಲ್ಲೆಯಲ್ಲಿ ಅಭಿವೃದ್ಧಿ ಮಾತ್ರ ಕುಂಠಿತ. ಪ್ರಸ್ತುತ ಸರ್ಕಾರದಲ್ಲಿ 11 ಮಂದಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದು, ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಂತ್ರಿಯಾಗಿದ್ದಾರೆ. ಹೀಗಾಗಿ, ಈ ಬಾರಿಯಾದರೂ ದೊಡ್ಡ ದೊಡ್ಡ ಯೋಜನೆಗಳನ್ನು ಜಿಲ್ಲೆಗೆ ತೆಗೆದುಕೊಂಡು ಬರುವಂತೆ ಜಿಲ್ಲೆಯ ಜನ ಆಗ್ರಹಿಸುತ್ತಿದ್ದಾರೆ.
ಸುವರ್ಣ ವಿಧಾನಸೌಧಕ್ಕೆ ತುಂಬಬೇಕಿದೆ ಶಕ್ತಿ: ಸುವರ್ಣ ವಿಧಾನಸೌಧಕ್ಕೆ ರಾಜ್ಯ ಮಟ್ಟದ ಮಹತ್ವದ ಕಚೇರಿಗಳನ್ನು ಸ್ಥಳಾಂತರ ಮಾಡುವಂತೆ ಈ ಭಾಗದ ಜನ ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ, ಇದಕ್ಕೆ ಯಾವ ಸರ್ಕಾರಗಳೂ ಸೊಪ್ಪು ಹಾಕುತ್ತಿಲ್ಲ. ಇದರಿಂದ ಚಳಿಗಾಲದ ವೇಳೆ ಹತ್ತು ದಿನದ ಅಧಿವೇಶನಕ್ಕೆ ಮಾತ್ರ ಶಕ್ತಿಸೌಧ ಸೀಮಿತವಾಗಿ ಬಿಳಿ ಆನೆಯಂತಾಗಿದೆ. ಐನೂರು ಕೋಟಿ ರೂ. ಖರ್ಚು ಮಾಡಿ ಸುವರ್ಣಸೌಧ ಕಟ್ಟಿದ್ದಾದರೂ ಯಾವ ಪುರುಷಾರ್ಥಕ್ಕೆ ಎಂದು ಇಲ್ಲಿನ ಜನ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಸರ್ಕಾರವಾದರೂ ಈ ಶಕ್ತಿಸೌಧಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ.
ಸಂಚಾರ ನಿಯಂತ್ರಣಕ್ಕೆ ಬೇಕಿದೆ ಮೇಲ್ಸೇತುವೆ : ಬೆಳಗಾವಿ ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಮಿತಿ ಮೀರುತ್ತಿದೆ. ಇದನ್ನು ನಿಯಂತ್ರಿಸಲು ಮೇಲ್ಸೇತುವೆ ನಿರ್ಮಾಣದ ಅವಶ್ಯಕತೆಯಿದೆ. ಸಂಕಮ ಹೋಟೆಲ್, ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಸಂಭಾಜಿ ವೃತ್ತ ಮಾರ್ಗವಾಗಿ ಪೀರನವಾಡಿವರೆಗೂ ಇದನ್ನು ವಿಸ್ತರಿಸಿದರೆ ಸಂಚಾರ ದಟ್ಟಣೆ ನಿಯಂತ್ರಿಸಬಹುದು. ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಈ ಮಹತ್ವಾಕಾಂಕ್ಷಿ ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಪ್ರಸ್ತಾಪಿಸಿದ್ದರು. ಆದರೆ, ಅದು ಕಾರ್ಯಗತವಾಗಿರಲಿಲ್ಲ. ಈಗ ಸತೀಶ್ ಜಾರಕಿಹೊಳಿ ಅವರೇ ಮತ್ತೆ ಉಸ್ತುವಾರಿ ಸಚಿವರಾಗಿದ್ದು, ಯೋಜನೆ ಜಾರಿಗೆ ಮುಂದಾಗಬೇಕಿದೆ.
ಬೆಳಗಾವಿ ಜಿಲ್ಲೆಗೆ ಬೇಕಿದೆ ಹೊಸ ಬಸ್ಗಳು : ಶಕ್ತಿ ಯೋಜನೆ ಜಾರಿಯಾದ ಬಳಿಕ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವ ಬಸ್ಗಳ ಸ್ಥಿತಿ ಚಿಂತಾಜನಕವಾಗಿದೆ. ಅದರಲ್ಲೂ ಗ್ರಾಮೀಣ ಭಾಗಕ್ಕೆ ಹೋಗುವ ಬಸ್ಗಳ ಸ್ಥಿತಿಯಂತು ಹೇಳೋದೆ ಬೇಡ. ಬೆಂಗಳೂರಿನಲ್ಲಿ ಬಳಸಿದ ಬಸ್ಗಳನ್ನು ಇಲ್ಲಿಗೆ ಬಿಡುತ್ತಿದ್ದಾರೆ. ಅಲ್ಲದೇ, ಸಾಕಷ್ಟು ಗ್ರಾಮೀಣ ಪ್ರದೇಶಗಳಿಗೆ ಬಸ್ಗಳನ್ನೇ ಬಿಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ವೃದ್ಧರು ಸೇರಿ ಎಲ್ಲರಿಗೂ ಬಹಳಷ್ಟು ಸಮಸ್ಯೆಯಾಗುತ್ತಿದೆ. ನೀವು ಉಚಿತ ಬಸ್ ಪ್ರಯಾಣ ಕೊಡದಿದ್ದರೂ ನಡೆಯುತ್ತದೆ. ಆದರೆ, ನಮ್ಮೂರಿಗೆ ಸರಿಯಾಗಿ ಬಸ್ಗಳನ್ನು ಬಿಡಿ ಎಂದು ಸಾಕಷ್ಟು ಜನ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಖಾನಾಪುರ ಕಾಡಂಚಿನ ಗ್ರಾಮಗಳಿಗೆ ಬೇಕಿದೆ ಆರೋಗ್ಯ ಸೇವೆ: ಖಾನಾಪುರ ತಾಲೂಕಿನ ಕಾಡಂಚಿನ ಸಾಕಷ್ಟು ಹಳ್ಳಿಗಳಲ್ಲಿ ಆರೋಗ್ಯ ಸೇವೆ ಮರಿಚಿಕೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆಯಿಂದ ಸಾಕಷ್ಟು ಜನ ಪರದಾಡುವಂತಿದೆ. ಇನ್ನು ಸಮರ್ಪಕ ರಸ್ತೆ, ಬಸ್ ಸೇವೆ ಇಲ್ಲದಿರುವುದರಿಂದ ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಆಂಬ್ಯುಲೆನ್ಸ್ ಬರಲು ಕೂಡ ಆಗದಂತ ಅನೇಕ ಪ್ರದೇಶಗಳಿವೆ. ಇದರಿಂದಾಗಿ ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ಸೂಕ್ತ ಚಿಕಿತ್ಸೆ ಸಿಗದೆ ಅದೆಷ್ಟೋ ಜೀವಗಳು ಬಲಿಯಾದ ಉದಾಹರಣೆ ಕೂಡ ಇದೆ. ಈ ಬಾರಿಯ ಬಜೆಟ್ನಲ್ಲಿಯಾದರೂ ನಮ್ಮ ಭಾಗದ ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಘೋಷಣೆ ಮಾಡಬೇಕು ಎಂದು ಶಿಂಧೊಳ್ಳಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರದೀಪ ಘಾಡೆ ಆಗ್ರಹಿಸಿದ್ದಾರೆ.
ದೊಡ್ಡ ಕೈಗಾರಿಕೆಗಳು ಬೇಕು: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಪ್ರಮುಖ ಕೊಂಡಿಯಾಗಿರುವ ಬೆಳಗಾವಿಯಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಆರಂಭಿಸುವ ಅವಶ್ಯಕತೆಯಿದೆ. ಬಿಡಿಭಾಗಗಳ ತಯಾರಿಕೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಬೆಳಗಾವಿ ನಗರದಲ್ಲಿ ಕೈಗಾರಿಕೆಗಳಿಗೆ ಸರ್ಕಾರದಿಂದ ಅಷ್ಟಾಗಿ ಪ್ರೋತ್ಸಾಹ ಸಿಕ್ಕಿಲ್ಲ. ಕೈಗಾರಿಕೆ ಪ್ರದೇಶದಲ್ಲಿ ಮೂಲಸೌಲಭ್ಯಗಳೇ ಇಲ್ಲ. ಆದ್ಯತೆ ಮೇರೆಗೆ ಇಲ್ಲಿ ಮೂಲಸೌಕರ್ಯ ಕೊಡಬೇಕು. ಉದ್ಯೋಗ ಸೃಷ್ಟಿ ದೃಷ್ಟಿಯಿಂದ ಕೈಗಾರಿಕಾ ವಲಯ ಸ್ಥಾಪಿಸಬೇಕು. ಕೊಲ್ಹಾಪುರ ಮಾದರಿಯಲ್ಲಿ ಐದು ಸಾವಿರ ಎಕರೆ ಪ್ರದೇಶದಲ್ಲಿ ಫೈವ್ ಸ್ಟಾರ್ ಇಂಡಸ್ಟ್ರೀಯಲ್ ಎಸ್ಟೇಟ್, 500 ಎಕರೆಯಲ್ಲಿ ಫೌಂಡ್ರಿ ಪಾರ್ಕ್ ಸ್ಥಾಪಿಸಬೇಕು. 1000ಕ್ಕೂ ಅಧಿಕ ಸಣ್ಣ, ಮಧ್ಯಮ ಕೈಗಾರಿಕೆಗಳು ಇಲ್ಲಿದ್ದು, ದೊಡ್ಡ ಕೈಗಾರಿಕೆಗಳನ್ನು ಸೆಳೆಯಬೇಕಿದೆ ಎಂದು ಉದ್ಯಮಿ ರೋಹನ್ ಜುವಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಬಜೆಟ್ ಮೇಲೆ ಶಿವಮೊಗ್ಗ ಜಿಲ್ಲೆಯ ನಿರೀಕ್ಷೆಗಳೇನು..?
ಜಿಲ್ಲಾ ವಿಭಜನೆಗೆ ಜೀವ ತುಂಬುತ್ತಾ ಸರ್ಕಾರ?: ಬೆಳಗಾವಿಯು 15 ತಾಲೂಕು ಹೊಂದಿರುವ ಅತಿ ದೊಡ್ಡ ಜಿಲ್ಲೆ. ಹೀಗಾಗಿ, ಆಡಳಿತ ಸುಗಮವಾಗಲು ಚಿಕ್ಕೋಡಿ, ಬೈಲಹೊಂಗಲ/ ಗೋಕಾಕ್ ಮತ್ತು ಬೆಳಗಾವಿ ಹೀಗೆ ಮೂರು ಜಿಲ್ಲೆಗಳನ್ನು ರಚನೆ ಮಾಡಬೇಕೆಂಬುದು ದಶಕಗಳ ಬೇಡಿಕೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕು ಎಂಬುದು ಇಲ್ಲಿನ ಜನರ ಆಗ್ರಹ.
'ಈಟಿವಿ ಭಾರತ'ದ ಜೊತೆ ಮಾತನಾಡಿದ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ, "ಬೆಳಗಾವಿಯಲ್ಲಿ 1992ರಲ್ಲಿ ಅಬ್ದುಲ್ ಬಾರಿ ನವಾಬ್ ಅವರು ಮಾಸ್ಟರ್ ಪ್ಲಾನ್ ಮಾಡಿದ್ದರು. ಆಮೇಲೆ ಮಾಸ್ಟರ್ ಪ್ಲಾನ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಆರು ಕಿ.ಮೀ. ಮೇಲ್ಸೇತುವೆ ನಿರ್ಮಾಣ ಮಾಡುವ ಅವಶ್ಯಕತೆಯಿದೆ. ಜಿಲ್ಲಾಧಿಕಾರಿ ಕಚೇರಿ ಇದ್ದಲ್ಲಿ ಜಿಲ್ಲಾಡಳಿತ ಭವನ ಕಟ್ಟಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ಲಾನ್ ಮಾಡಿಕೊಂಡಿದ್ದಾರೆ. ಆ ಪ್ರಕಾರ ಬಹುಮಹಡಿ ಕಟ್ಟಿ, ಅಲ್ಲಿ ಜಿಲ್ಲಾ ಮಟ್ಟದ ಎಲ್ಲ ಕಚೇರಿ ಸ್ಥಳಾಂತರ ಮಾಡಬೇಕು. ನೆನೆಗುದಿಗೆ ಬಿದ್ದಿರುವ 11 ಏತ ನೀರಾವರಿ ಯೋಜನೆಗಳಿಗೆ ಹಣಕಾಸು ಒದಗಿಸಬೇಕು. ಈ ಎಲ್ಲ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಹಣಕಾಸು ಒದಗಿಸಬೇಕು" ಎಂದು ಆಗ್ರಹಿಸಿದರು.