ಬೆಳಗಾವಿ: ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರದಿಂದ ಎಂಇಎಸ್ ಮತ ಪಡೆದಿತ್ತು. ಜಿಲ್ಲೆಯ ಹದಿಮೂರು ಜನ ಶಾಸಕರೆಲ್ಲರೂ ಸೇರಿ ಕೆಲಸ ಮಾಡಿದ್ರೇ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 58ವಾರ್ಡ್ಗಳಲ್ಲಿ 50 ವಾರ್ಡ್ಗಳನ್ನ ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕರಿಗೆ ಸಚಿವ ಉಮೇಶ್ ಕತ್ತಿ ಕರೆ ನೀಡಿದರು.
ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಹಿನ್ನೆಲೆ ನಗರದ ಧರ್ಮನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಶೇಷ ಸಭೆ ಜರುಗಿತು. ಈ ಸಂದರ್ಭದಲ್ಲಿ ಅರಣ್ಯ ಮತ್ತು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಎಪ್ಪತ್ತು ವರ್ಷದಿಂದ ದೇಶದಲ್ಲಿ ಸರಿಯಾದ ಅಭಿವೃದ್ಧಿಯಾಗಿರಲಿಲ್ಲ. ಕೇಂದ್ರ ಸರ್ಕಾರದ ಯೋಜನೆಯಿಂದ ಅಭಿವೃದ್ಧಿಯಾಗುತ್ತಿದೆ.
ಈ ಚುನಾವಣೆ ಜಾತಿ, ಹೆಸರು, ಎಂಇಎಸ್ ಮೇಲೆ ಆಗುವುದಿಲ್ಲ. ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರದಿಂದ ಎಂಇಎಸ್ ಮತ ಪಡೆದಿತ್ತು. ಹದಿಮೂರು ಜನ ಶಾಸಕರೆಲ್ಲರೂ ಸೇರಿ ಕೆಲಸ ಮಾಡಿದ್ರೇ 58ವಾರ್ಡ್ಗಳಲ್ಲಿ 50 ವಾರ್ಡ್ ಗಳನ್ನ ಗೆಲ್ಲುವ ವಿಶ್ವಾಸವಿದೆ. ನಲವತ್ತು ವರ್ಷದಿಂದ ಬೆಳಗಾವಿಯಲ್ಲಿ ಬೇರೆ ಧ್ವಜ ಹಾರುತ್ತಿದೆ. ಈ ಬಾರಿ ಬಿಜೆಪಿ ಧ್ವಜ ಹಾರಿಸುವ ಕೆಲಸ ಮಾಡೋಣ. ನಾನು ಹದಿನೈದು ದಿನ ಬೆಳಗಾವಿಯಲ್ಲಿದ್ದು ಚುನಾವಣೆಯಲ್ಲಿ ಭಾಗಿಯಾಗುತ್ತೇನೆ ಎಂದು ಕತ್ತಿ ಹೇಳಿದರು.
ಜಾರಕಿಹೊಳಿ ಬ್ರದರ್ಸ್ ಗೈರು: ಬಿಜೆಪಿ ವಿಶೇಷ ಸಭೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಗೈರಾಗಿದ್ದರು. ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಬೆಳಕಿಗೆ ಬಂದಾಗಿನಿಂದ ಜಾರಕಿಹೊಳಿ ಬ್ರದರ್ಸ್ಗಳು ಬಿಜೆಪಿ ಸಭೆ, ಸಮಾರಂಭಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಯಡಿಯೂರಪ್ಪ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತಾರೆ: ಕಾರಜೋಳ: ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ನಮಗೆ ಅತಿ ಹಚ್ಚು ಶಕ್ತಿ ಇರುವ ಜಿಲ್ಲೆ ಬೆಳಗಾವಿ. 18 ಕ್ಷೇತ್ರಗಳ ಪೈಕಿ 13 ಜನ ಶಾಸಕರು, ಇಬ್ಬರು ಸಂಸದರು ಇದ್ದಾರೆ. ಬೆಳಗಾವಿಯಲ್ಲಿ ಸಿಂಹದಂತ ಕಾರ್ಯಕರ್ತರು ನಮ್ಮ ಮುಂದೆ ಇದ್ದಾರೆ. ಪಕ್ಷದ ಗೆಲುವು ಕಾರ್ಯಕರ್ತರ ಮೇಲೆ ಅವಲಂಬಿತವಾಗಿರುತ್ತದೆ.
ಟಿಕೆಟ್ ಯಾರಿಗೆ ಸಿಗಲಿ ಎಲ್ಲರೂ ಹುರಿಯಾಳು ಅಂತಾ ಕೆಲಸ ಮಾಡಿದ್ರೆ 50 ವಾರ್ಡ್ಗಳನ್ನು ಗೆಲ್ತೇವೆ. ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ಸಿಎಂ ಬೊಮ್ಮಾಯಿ ಆಶಯವನ್ನು ನಿಮಗೆ ಹೇಳ್ತಿರುವೆ. ಯಡಿಯೂರಪ್ಪ ಸಹ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ನಮ್ಮ ಪಕ್ಷದ ಆಸ್ತಿ ಅಂದ್ರೆ ಕಾರ್ಯಕರ್ತರು ಎಂದು ಸಚಿವ ಕಾರಜೋಳ ಹೇಳಿದರು.