ಬೆಳಗಾವಿ: ಪಾಲಿಕೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಬಿಜೆಪಿಗೆ ಇದೀಗ ಮೇಯರ್ - ಉಪಮೇಯರ್ ಆಯ್ಕೆ ದೊಡ್ಡ ತಲೆನೋವಾಗಿದೆ. ಈ ಸಂಬಂಧ ನಗರದ ಹೊರವಲಯದ ಗೌಪ್ಯ ಸ್ಥಳದಲ್ಲಿ ಸಚಿವ ಗೋವಿಂದ ಕಾರಜೋಳ ಹಾಗೂ ಶಾಸಕ ಅಭಯ ಪಾಟೀಲ ತೀವ್ರ ಚರ್ಚೆ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ಗೆದ್ದು ಬೀಗಿರುವ ಬಿಜೆಪಿಗೆ ಮೇಯರ್ ಅಭ್ಯರ್ಥಿ ಆಯ್ಕೆ ತಲೆನೋವಾಗಿ ಪರಿಣಮಿಸಿದೆ. ಪ್ರವಾಸಿ ಮಂದಿರದಲ್ಲಿದ್ದ ಸಚಿವ ಕಾರಜೋಳ ಅವರನ್ನು ತಾವೇ ಡ್ರೈವ್ ಮಾಡಿಕೊಂಡು ಶಾಸಕ ಅಭಯ ಗೌಪ್ಯ ಸ್ಥಳಕ್ಕೆ ಕರೆದೊಯ್ದರು. ಗೌಪ್ಯ ಸ್ಥಳದಲ್ಲಿ ಇಬ್ಬರು ನಾಯಕರ ಮಧ್ಯೆ ಮಹತ್ವದ ಮಾತುಕತೆ ನಡೆಯುತ್ತಿದೆ.
ಉಭಯ ನಾಯಕರು ಪಾಲಿಕೆ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದರು. 58 ವಾರ್ಡ್ಗಳ ಪೈಕಿ 35ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಸಾಮಾನ್ಯ ವರ್ಗಕ್ಕೆ ಮೇಯರ್, ಸಾಮಾನ್ಯ ಮಹಿಳೆ ವರ್ಗಕ್ಕೆ ಉಪಮೇಯರ್ ಸ್ಥಾನ ಮೀಸಲಿಡಲಾಗಿದೆ.
ನೂತನ ಸದಸ್ಯರು ನಾಳೆ ಬೆಂಗಳೂರಿಗೆ ತೆರಳಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಲಿದ್ದಾರೆ. ನೂತನ ಸದಸ್ಯರ ಬೆಂಗಳೂರು ಭೇಟಿಗೂ ಮುನ್ನ ಸಚಿವ ಗೋವಿಂದ ಕಾರಜೋಳ, ಶಾಸಕ ಅಭಯ್ ಪಾಟೀಲ್ ಚರ್ಚೆ ಕುತೂಹಲ ಮೂಡಿಸಿದೆ.
ಲಿಂಗಾಯತ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಲಿ:
ಬೆಳಗಾವಿ ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಲಿಂಗಾಯತ ಸಮುದಾಯಕ್ಕೆ ಮೇಯರ್ ಸ್ಥಾನ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ್ ಆಗ್ರಹಿಸಿದ್ದಾರೆ.
ಟಿಕೆಟ್ ಹಂಚಿಕೆ ವೇಳೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಅನ್ಯಾಯವಾಗಿತ್ತು. ಈ ಅನ್ಯಾಯ ಸರಿಪಡಿಸಲು ಲಿಂಗಾಯತ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕು. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 80 ಸಾವಿರ, ದಕ್ಷಿಣ ಕ್ಷೇತ್ರದಲ್ಲಿ 30 ಸಾವಿರ ಲಿಂಗಾಯತ ಮತದಾರರಿದ್ದಾರೆ.
ಹೀಗಾಗಿ, ಲಿಂಗಾಯತ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕೆಂಬುದು ನಮ್ಮ ಬೇಡಿಕೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯುತ್ತೇವೆ ಎಂದು ರತ್ನಪ್ರಭಾ ಬೆಲ್ಲದ್ ಹೇಳಿದ್ದಾರೆ.
ಓದಿ: Namo ನಾಡಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ... ರೂಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ಯಾಕೆ!?