ಚಿಕ್ಕೋಡಿ(ಬೆಳಗಾವಿ): ಧಾರಾಕಾರ ಮಳೆಯು ಭೀಕರ ಪ್ರವಾಹವನ್ನು ಸೃಷ್ಟಿಸಿದೆ. ಇದರಿಂದ ಹುಕ್ಕೇರಿ ಪಟ್ಟಣದಲ್ಲಿ ಜನಜೀವನ ಅಕ್ಷರಶಃ ಬೀದಿಗೆ ಬಂದಿದೆ. ಕೆಲವೆಡೆ ಮಣ್ಣಿನಿಂದ ನಿರ್ಮಿತವಾಗಿದ್ದ ಗೋಡೆಗಳು ಬಿದ್ದರೆ, ಇನ್ನೂ ಕೆಲವೆಡೆ ಬೈಕು, ಕಾರುಗಳು ನೀರಿನಲ್ಲಿ ತೇಲಿ ಹೋಗಿವೆ. ವಿದ್ಯುತ್ ಕಂಬಗಳು ನೆಲಕ್ಕುರಳಿವೆ. ಇವೆಲ್ಲದರ ನಡುವೆ ಅತಿಯಾದ ನೀರಿನ ಹರಿವಿನಲ್ಲಿ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಅಜ್ಜ-ಮೊಮ್ಮಗ ಸದ್ಯ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಅಜ್ಜ ನಜೀರ್ ಶೆಗಡಿ ತಮ್ಮ ಮೊಮ್ಮಗನೊಂದಿಗೆ ಮಾರುಕಟ್ಟೆಗೆಂದು ತೆರಳಿದ್ದಾಗ ಮಳೆ ಅಬ್ಬರಿಸಿದೆ. ಪ್ರವಾಹ ಉಂಟಾಗಿ ನೀರಿನ ರಭಸಕ್ಕೆ ಅಜ್ಜ-ಮೊಮ್ಮಗ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಆಗ ಸ್ಥಳೀಯರು ಈ ಇಬ್ಬರನ್ನು ರಕ್ಷಣೆ ಮಾಡಿ ಉಪಚರಿಸಿದ್ದಾರೆ. ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಹುಕ್ಕೇರಿ ಪಟ್ಟಣವೊಂದರಲ್ಲೇ ಬಾನುವಾರ 74 ಮಿ.ಮೀ ಮಳೆ ದಾಖಲಾಗಿದ್ದು, ಪಟ್ಟಣದಲ್ಲಿ 40 ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಅಲ್ಲದೇ, ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಕಿರಾಣಿ ಅಂಗಡಿ, ಪಾನ್ ಶಾಪ್, ಮೆಡಿಕಲ್ ಸ್ಟೋರ್ ಎಲ್ಲದೊರಳಗೂ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನೀರಲ್ಲಿ ಕೊಚ್ಚಿಹೋಗಿವೆ.