ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. 2020ರಲ್ಲಿ ಹಿಂಡಲಗಾ ಗ್ರಾಮದ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಪತ್ರ ನೀಡಿದ್ದೆ ಎಂದು ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಆಶಾ ಐಹೊಳೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಡಲಗಾ ಗ್ರಾಮದ ಲಕ್ಷ್ಮಿದೇವಿ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ನನ್ನ ಬಳಿ ಬಂದಿದ್ದರು. ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಅನುಮತಿ ಪತ್ರ ನೀಡುವಂತೆ ಕೋರಿದ್ದರು. ಆ ಪ್ರಕಾರ ಗ್ರಾ.ಪಂ ಅಧ್ಯಕ್ಷರು, ಸದಸ್ಯರಿಗೆ ನಾನು ಲೆಟರ್ ಕೊಟ್ಟಿದ್ದು ನಿಜ. ಆದರೆ, ನಾನು ಕೊಟ್ಟ ಲೆಟರ್‌ಗೆ ಏನು ಆ್ಯಕ್ಷನ್ ಆಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುಮೋದನೆ ನೀಡಿರುವ ವಿಷಯ ನನಗೆ ಇವತ್ತಷ್ಟೇ ಗೊತ್ತಾಗಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್‌ಗೆ ನಾನು ಮುಖಾಮುಖಿ ಎಂದೂ ಭೇಟಿಯಾಗಿಲ್ಲ. ಅವರ ಆತ್ಮಹತ್ಯೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಆದರೆ, ಸಂತೋಷ್ ಆತ್ಮಹತ್ಯೆಗೆ ಶರಣಾಗಿರುವುದು ದುರಂತದ ವಿಷಯ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಂದಿರುವ ರಿಸೀವ್ ಕಾಪಿನೂ ನನಗೆ ಸಿಕ್ಕಿಲ್ಲ. ಜಿ.ಪಂ ಅಧಿಕಾರಿಗಳು ಅದನ್ನು ಕಡತದಲ್ಲಿ ಇಟ್ಟಿರುತ್ತಾರೆ. ಕಾಮಗಾರಿಗಳ ಮಂಜೂರಾತಿಗೆ ನನ್ನ ಬಳಿ ಹಿಂಡಲಗಾ ಗ್ರಾ.ಪಂ ಸದಸ್ಯರು ಬಂದಿದ್ದರು. ಕೆಲಸ ಆದ ಬಗ್ಗೆ ನನಗೇನೂ ಮಾಹಿತಿ ನೀಡಿಲ್ಲ. ಆ ಬಗ್ಗೆ ಗೊತ್ತೂ ಇಲ್ಲ. ನನ್ನ ಪತ್ರಕ್ಕೆ 2021ರ ಫೆ.17ಎಂದು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಸಂತೋಷ್ ಪಾಟೀಲ್ ನನಗೆ ಗೊತ್ತೇ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ತನಿಖಾಧಿಕಾರಿಗಳು ಸಮಗ್ರ ತನಿಖೆ ಮಾಡಬೇಕು. ನಾನು ಕೊಟ್ಟಿರುವ ಪತ್ರದ ಬಗ್ಗೆ ಮೇಲಾಧಿಕಾರಿಗಳಿಗೆ ಎಷ್ಟು ಮಾಹಿತಿ ಇದೆ ಎಂಬುದು ನನಗೆ ಗೊತ್ತಿಲ್ಲ ಎಂದು ಆಶಾ ಐಹೊಳೆ ಹೇಳಿದರು.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ಗೆ ಮತ್ತೊಂದು ಟ್ವಿಸ್ಟ್: ಕಾಮಗಾರಿಗಳಿಗೆ ಅನುಮೋದನೆ ನೀಡಿತ್ತಾ ಸರ್ಕಾರ?