ಬೆಳಗಾವಿ: ಆಲಮಟ್ಟಿ ಜಲಾಶಯ ಹಾಗೂ ಮಹದಾಯಿ ಯೋಜನೆಗೆ ಕೆಲವೊಂದು ಕಾನೂನಿನ ತೊಡಕುಗಳಿದ್ದು, ಈ ಕುರಿತಂತೆ ನಾನು ಏನೂ ಮಾತನಾಡುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಇದ್ದಾರೆ. ಅವರು ಇರುವವರೆಗೂ ನಾನು ಉಸ್ತುವಾರಿ ತೆಗೆದುಕೊಳ್ಳುವುದಿಲ್ಲ. ಶೆಟ್ಟರ ಅವರು ಬಿಟ್ಮೇಲೆ ನಾನು ಜಿಲ್ಲೆಯ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದರು.
ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರಿಗೆ ಎಷ್ಟೇ ಹಣಕಾಸಿನ ತೊಂದರೆ ಬಂದರೂ ಬಿಜೆಪಿ ಸರ್ಕಾರ ಹಣ ಕೊಡಲು ಸಿದ್ಧವಿದೆ. ಮಹದಾಯಿ ಯೋಜನೆ ಕುರಿತಂತೆ ರಾಜ್ಯದ ಹಿತದೃಷ್ಟಿಯಿಂದ ಕೆಲವು ವಿಷಯಗಳನ್ನು ಪ್ರಸ್ತಾಪಿಸಬೇಡಿ ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕಕ್ಕೆ ಈ ಬಾರಿ ಬಜೆಟ್ನಲ್ಲಿ ಯಾವ ಅನ್ಯಾಯ ಆಗಿಲ್ಲ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿ ಕಂಡರೆ ಹೇಗೆ ಸ್ವಾಮಿ. ಆರ್ಥಿಕ ಕಷ್ಟದ ಸಮಯದಲ್ಲಿಯೂ ಉತ್ತರ ಕರ್ನಾಟಕಕ್ಕೆ ಕಾರ್ಮಿಕರ, ರೈತರ ಪರವಾಗಿ ಯಡಿಯೂರಪ್ಪನವರು ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು.
ಪ್ರತ್ಯೇಕ ಜಿಲ್ಲೆ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ಜಿಲ್ಲೆ ಮಾತುಕತೆ ಹಂತದಲ್ಲಿದೆ. ನಾವು ಈಗಾಗಲೇ ತಾಲೂಕುಗಳನ್ನು ವಿಭಜನೆ ಮಾಡಿ ನಂತರ ಜಿಲ್ಲೆಯ ವಿಭಜನೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೇವೆ. ಆದ್ರೆ, ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧವಿರುವುದಾಗಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.