ಬೆಳಗಾವಿ: ನಮ್ಮ ಪಕ್ಷದ ವರಿಷ್ಠರ ಹಾಗೂ ಸಂಘ ಪರಿವಾರದ ಮುಖಂಡರ ಸೂಚನೆ ಹಿನ್ನಲೆಯಲ್ಲಿ ನಮ್ಮಲ್ಲಿರುವ ಸಣ್ಣತನ ಹಾಗೂ ವೈಮನಸ್ಸು ಬಿಟ್ಟಿದ್ದೇವೆ. ನೂರು ವರ್ಷಗಳ ಇತಿಹಾಸ ಇರುವ ಡಿಸಿಸಿ ಬ್ಯಾಂಕಿಗೆ ಈ ಸಲ ನಿರ್ದೇಶಕರ ಹಾಗೂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಅವಿರೋಧವಾಗಿ ನಡೆಯಲಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ವರಿಷ್ಠರ ಸೂಚನೆ ಹಿನ್ನಲೆಯಲ್ಲಿ ಅಕ್ಕಪಕ್ಕವೇ ಕುಳಿತು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಮಲ ನಾಯಕರು, ರಾಜ್ಯದಲ್ಲಿ ಸಹಕಾರ ಕ್ಷೇತ್ರದ ಅತಿ ಶ್ರೀಮಂತ ಬ್ಯಾಂಕ್ ಎಂಬ ಕೀರ್ತಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ಪಾತ್ರವಾಗಿದೆ. ರೈತರ ಪ್ರಗತಿ ಹಾಗೂ ವರಿಷ್ಠರ ಸೂಚನೆ ಹಿನ್ನಲೆಯಲ್ಲಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡುವ ಪ್ರಯತ್ನ ನಡೆದಿದೆ. ಅದರಲ್ಲಿ ನಾವು ಸಫಲ ಕೂಡ ಆಗುತ್ತೇವೆ. ಹತ್ತು ತಾಲೂಕು ಪೈಕಿ ಏಳು ತಾಲೂಕುಗಳಿಂದ ತಲಾ ಒಂದೇ ನಾಮಪತ್ರ ಸಲ್ಲಿಕೆಯಾಗಿದೆ. ಹೀಗಾಗಿ ಈ ಏಳು ನಿರ್ದೇಶಕರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಖಾನಾಪುರ, ಬೈಲಹೊಂಗಲ ಮತ್ತು ರಾಮದುರ್ಗ ತಾಲೂಕಿನಿಂದ ಎರಡೆರದು ನಾಮಪತ್ರ ಸಲ್ಲಿಕೆಯಾಗಿವೆ.
ನಾಳೆ ನಾಮಪತ್ರ ಪರಿಶೀಲನೆ ಇದ್ದು, ಜಿಲ್ಲೆಯ ರೈತರು ಹಾಗೂ ಬ್ಯಾಂಕ್ ಪ್ರಗತಿಯ ದೃಷ್ಟಿಯಿಂದ ಅವರನ್ನೂ ಮನವೊಳಿಸುತ್ತೇವೆ. ಇತಿಹಾಸದಲ್ಲೇ 16 ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ರಾಜ್ಯಕ್ಕೆ ಒಂದು ಸಂದೇಶ ರವಾನಿಸುವ ಉದ್ದೇಶ ನಮ್ಮದು. ಇದಕ್ಕೆ ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ ಸೇರಿ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಸಿದ್ದುಗೆ ಸವದಿ ಟಾಂಗ್! : ಕೇವಲ 15 ದಿನಗಳಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಲಕ್ಷ್ಮಣ ಸವದಿ ಟಾಂಗ್ ಕೊಟ್ಟಿದ್ದಾರೆ. ಕೆಲವರು ರಾಜ್ಯದಲ್ಲಿ ಊಹಾಪೋಹ ಸೃಷ್ಟಿಸುತ್ತಿದ್ದಾರೆ. ಹೀಗೆ ಕಾಗೆ ಹಾರಿಸುವ ಕೆಲಸ ನಡೆಯುತ್ತಿದೆ. ಇದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮುಂದಿನ ಮೂರು ವರ್ಷ ಬಿ.ಎಸ್.ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದರು.
ಕತ್ತಿಗೆ ಸಚಿವ ಸ್ಥಾನ ಕೊಡಿಸುತ್ತೇವೆ : ನಾವು ಒಂದೇ ಪಕ್ಷದಲ್ಲಿದ್ದರೂ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ. ಇದೀಗ ಸಣ್ಣತನ, ಭಿನ್ನಾಭಿಪ್ರಾಯ, ವೈಮನಸ್ಸು ಬಿಟ್ಟಿದ್ದೇವೆ. ರಾಜ್ಯದ ಹಿರಿಯ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ನಾವೆಲ್ಲರೂ ಒಗ್ಗಟ್ಟಿನಿಂದ ಸಿಎಂಗೆ ಪ್ರಸ್ತಾಪ ಸಲ್ಲಿಸುತ್ತೇವೆ. ಅದು ನಮ್ಮ ಕರ್ತವ್ಯ ಕೂಡ ಆಗಿದೆ. ಮುಂದಿನ 20 ವರ್ಷ ನಾವೆಲ್ಲರೂ ಕೂಡಿಯೇ ಇರುತ್ತೇವೆ. ಜಿಲ್ಲೆಯ ಪ್ರಗತಿಗೆ ಶ್ರಮಿಸುತ್ತೇವೆ. ಕೂಡಲು ಒಂದು ವೇದಿಕೆ ಹಾಗೂ ಮೇಲಿನವರ ಸೂಚನೆ ಬರಬೇಕಿತ್ತು. ಅದೀಗ ಬಂದಿದ್ದು, ನಾವೆಲ್ಲರೂ ಮುಂದೆಯೂ ಒಂದೇ ಇರುತ್ತೇವೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡುತ್ತೇವೆ ಎಂದರು.
ಮಾಜಿ ಸಚಿವ ಉಮೇಶ ಕತ್ತಿ ಮಾತನಾಡಿ, ಡಿಸಿಸಿ ಬ್ಯಾಂಕ್ ಶತಮಾನದ ಸಂಭ್ರಮದಲ್ಲಿದೆ. ಈ ಹಿನ್ನಲೆಯಲ್ಲಿ ಶತಮಾನದ ಕಟ್ಟಡ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ. ನಾವೆಲ್ಲರೂ ದೆಹಲಿಗೆ ತೆರಳಿ ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತೇವೆ. ಅಲ್ಲದೇ ಮಹಿಳಾ ಸಬಲೀಕರಣಕ್ಕೆ ಹಾಗೂ ಉದ್ಯಮ ಕ್ಷೇತ್ರದ ಅಭಿವೃದ್ಧಿಗೂ ಬ್ಯಾಂಕ್ ನಿಂದ ಒಳ್ಳೆಯ ಕಾರ್ಯಗಳನ್ನು ಹಾಕಿಕೊಳ್ಳುತ್ತೇವೆ. ಇದಕ್ಕಾಗಿ ದೊಡ್ಡ ಸಮಾರಂಭ ಮಾಡುವ ಉದ್ದೇಶ ಹೊಂದಿದ್ದೇವೆ ಎಂದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಹಿಂದಿನ ಡಿಸಿಸಿ ಬ್ಯಾಂಕ್ ಚುನಾವಣೆ ನಮ್ಮನ್ನು ಇಬ್ಬಾಗ ಮಾಡಿತು. ಇದೀಗ ಅದೇ ಬ್ಯಾಂಕ್ ಚುನಾವಣೆಯಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ಎಲ್ಲ ಸ್ಥಾನಗಳು ಅವಿರೋಧ ಆಯ್ಕೆ ಆಗಲಿವೆ. ಇದಕ್ಕಾಗಿ ನಾವು ಮೂರು ದಿನಗಳ ಕಾಲ ಶ್ರಮಿಸುತ್ತೇವೆ. ರಾಜ್ಯಕ್ಕೆ ಒಳ್ಳೆಯ ಸಂದೇಶ ಬೆಳಗಾವಿಯಿಂದ ರವಾನೆ ಆಗಲಿದೆ ಎಂದರು.