ಬೆಳಗಾವಿ: ಜಿಲ್ಲೆಯಲ್ಲಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕತ್ತಿ ಹಾಗೂ ಜಾರಕಿಹೊಳಿ ಬ್ರದರ್ಸ್ ಬಣ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಬಣದ ಮಧ್ಯದ ಫೈಟ್‌ನಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಶಸ್ತ್ರತ್ಯಾಗ ಮಾಡಿರುವ ಕುರಿತು ಜಿಲ್ಲೆಯಲ್ಲಿ ಚರ್ಚೆ ಆರಂಭವಾಗಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ ಕಣಯಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಎರಡು ಬಣಗಳಾಗಿ ಅಧಿಕಾರದ ಗದ್ದುಗೆ ಏರಲು ಮುಸುಕಿನ ಗುದ್ದಾಟ ನಡೆಯುತಿದ್ದ ಬಗ್ಗೆ ಬಹಿರಂಗವಾಗಿಯೇ ಸವದಿ ನುಡಿದಿದ್ದರು. ಒಂದು ವರ್ಷದಿಂದ ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಹೊಂಚು ಹಾಕಿದ್ದ ಡಿಸಿಎಂ ಆಸೆಗೆ ಜಾರಕಿಹೊಳಿ ಫ್ಯಾಮಿಲಿ ಅಡ್ಡಿಯಾಗುವ ಮೂಲಕ ಸವದಿ ಆಟಕ್ಕೆ ಬ್ರೇಕ್ ಹಾಕಿದ್ದಾರೆ. ಇದರಿಂದಾಗಿ ಪಕ್ಷದಲ್ಲಿದ್ದ ರಾಜಕೀಯ ವಿರೋಧಿಗಳ ಜೊತೆ ಸವದಿ ರಾಜಿ ಸಂಧಾನ ಮಾಡಿಕೊಂಡಿದ್ದು, ಡಿಸಿಎಂ ಸವದಿ ರಾಜಿ ಸಂಧಾನ ಹಿಂದೆ ಸಿಎಂ ಕುರ್ಚಿ ಮೇಲಿನ ವ್ಯಾಮೋಹವಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಚುನಾವಣೆ ವಿಚಾರದಲ್ಲಿ ಆರ್‌ಎಸ್‌ಎಸ್ ಎಂಟ್ರಿ ಕೊಡುವ ಮೂಲಕ ಬಿಜೆಪಿ ನಾಯಕರ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕಲು ರಾಜಿ ಸಂಧಾನ ಮಾಡಿತ್ತು. ಡಿಸಿಎಂ ಲಕ್ಷ್ಮಣ ಸವದಿ ಬೆಳಗಾವಿ ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಕಳೆದ ಒಂದು ವರ್ಷದಿಂದ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ಒಂದು ಬಣ ರಚನೆ ಮಾಡಿಕೊಂಡು ಕಾರ್ಯ ಪ್ರವೃತ್ತರಾಗಿದ್ದರು.
ವಿರೋಧಿ ಬಣದಲ್ಲಿ ರಾಜಕೀಯ ಬದ್ದ ವಿರೋಧಿಗಳಾದ ಕತ್ತಿ, ಜಾರಕಿಹೊಳಿ ಬ್ರದರ್ಸ್ ಕೂಡ ನಾನಾ ತಂತ್ರಕಾರಿಗೆ ಮಾಡುತ್ತಿದ್ದರು. ಆದರೆ, ಇದೇ ವೇಳೆ ಮಧ್ಯಪ್ರವೇಶಿಸಿದ ಆರ್‌ಎಸ್‌ಎಸ್ ಮತ್ತು ಬಿಜೆಪಿ ವರಿಷ್ಠರು ಸವದಿಗೆ ಸೈಲೆಂಟ್ ಆಗುವಂತೆ ಹೇಳಿದ್ದಾರಂತೆ. ಜತೆಗೆ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯದಂತೆ ನೋಡಿಕೊಳ್ಳಲು ಸೂಚಿಸಿದ್ದರಂತೆ. ಅದರಂತೆ ಸೈಲೆಂಟ್ ಆದ ಸವದಿ ವಿರೋಧಿ ಬಣದವರು ಹೇಳಿದವರನ್ನೇ ನಿರ್ದೇಶಕರನ್ನಾಗಿ ಮಾಡಲು ಒಪ್ಪಿ ಅಧ್ಯಕ್ಷ ಸ್ಥಾನವನ್ನ ರಮೇಶ್ ಕತ್ತಿಗೆ ಬಿಟ್ಟು ಕೊಡುವ ಕೆಲಸ ಮಾಡಿದರು. ಈ ಬಗ್ಗೆ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿಯೇ ಪ್ರತಿಕ್ರಿಯಿಸಿದ್ದ ಸವದಿ ನಮ್ಮಲ್ಲಿ ವೈಮನಸ್ಸಿದ್ದಿದ್ದು ನಿಜ. ಅದನ್ನೆಲ್ಲ ಮರೆತು ರೈತರ ಅಭಿವೃದ್ಧಿ ಹಾಗೂ ಪಕ್ಷದ ಹಿತದೃಷ್ಟಿಯಿಂದ ಎಲ್ಲ ಮರೆತು ಒಗ್ಗೂಡಿದ್ದೇವೆ ಅಂತಾ ತಿಳಿಸಿದ್ದರು.
ಇನ್ನು ಬಿಜೆಪಿಯಲ್ಲಿ ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದ ಎಲ್ಲ ನಾಯಕರನ್ನು ಒಂದೇ ವೇದಿಕೆಯಲ್ಲಿ ತಂದ ಡಿಸಿಎಂ ಲಕ್ಷ್ಮಣ್ ಸವದಿ ಡಿಸಿಸಿ ಬ್ಯಾಂಕ್ನ 16 ನಿರ್ದೇಶಕ ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುವಂತೆ ನೋಡಿಕೊಂಡಿದ್ದರು. ಈ ಮೂಲಕ ಪಕ್ಷನಿಷ್ಠೆ ಮೆರೆದು ತಾನೊಬ್ಬ ಪವರ್ ಫುಲ್ ನಾಯಕ ಎಂಬ ಸಂದೇಶವನ್ನ ಹೈಕಮಾಂಡ್‌ಗೆ ರವಾನಿಸುವುದರ ಜತೆಗೆ ಜಿಲ್ಲಾ ನಾಯಕರ ಮನಗೆಲ್ಲುವ ಕೆಲಸವನ್ನು ಸವದಿ ಮಾಡಿದ್ದು, ಈ ಮೂಲಕ ಮುಂದೆ ಲಿಂಗಾಯತ ಸಮುದಾಯದಿಂದ ಸಿಎಂ ಮಾಡುವ ಪ್ರಮೇಯ ಬಂದಾಗ ತಾನೇ ಮುಂಚೂಣಿಯಲ್ಲಿರಬೇಕು ಇದಕ್ಕೆ ಯಾರೂ ವಿರೋಧ ಮಾಡಬಾರದು ಎಂಬ ಲೆಕ್ಕಾಚಾರದಲ್ಲಿ, ಸವದಿ ಸೈಲೆಂಟ್ ಆಗಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಆರಂಭವಾಗಿದೆ.
ಸಿಎಂ ಬದಲಾವಣೆ ವಿಚಾರ ಬಂದಾಗ ಡಿಸಿಎಂ ಲಕ್ಷ್ಮಣ್ ಸವದಿ ಹೆಸರು ಕೇಳಿಬಂದರೆ, ಸವದಿ ಬೆಂಬಲಕ್ಕೆ ಜಿಲ್ಲಾ ಬಿಜೆಪಿ ನಾಯಕರು ನಿಲ್ಲೋದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಒಂದಾಗಿದ್ದರೂ ಅವರ ಮಧ್ಯದ ವೈಮನಸ್ಸು ಶಮನಗೊಂಡಿಲ್ಲ. ಒಟ್ಟಾರೆಯಾಗಿ ಸದ್ಯ ಜಿಲ್ಲಾ ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ ಅಂತಾರೆ ರಾಜಕೀಯ ವಿಶ್ಲೇಷಕರು.