ಬೆಳಗಾವಿ: ಲೋಕಸಭಾ ಉಪಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಕೋವಿಡ್-19 ಮಾರ್ಗಸೂಚಿ ಪ್ರಕಾರ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಮತ ಎಣಿಕೆಗೆ ಹೆಚ್ಚುವರಿ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ಮೇ 2ರಂದು ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಸಿದ್ಧತೆಯನ್ನು ಪರಿಶೀಲಿಸಿದರು.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರವಾರು ಮತ ಎಣಿಕೆಗೆ ಕೊಠಡಿಗಳನ್ನು ಗುರುತಿಸಿ ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ಮೊದಲು ಪ್ರತಿ ವಿಧಾನಸಭಾ ಕ್ಷೇತ್ರವಾರು ಒಂದು ಕೊಠಡಿಯನ್ನು ನಿಗದಿಪಡಿಸಿ ಪ್ರತಿ ಕೊಠಡಿಯಲ್ಲಿ ಹದಿನಾಲ್ಕು ಟೇಬಲ್ಗಳಿಗೆ ವ್ಯವಸ್ಥೆ ಮಾಡಲಾಗಿತ್ತು.
ಇದೀಗ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಹೆಚ್ಚುವರಿ ಕೊಠಡಿಯನ್ನು ಒದಗಿಸುವ ಮೂಲಕ ಪ್ರತಿ ಕೊಠಡಿಯಲ್ಲಿ ಏಳು ಟೇಬಲ್ಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೀಗ ಕೋವಿಡ್-19 ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಎಣಿಕೆ ಕೇಂದ್ರಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.