ಬೆಳಗಾವಿ: ಬೆಳಗಾವಿಯಿಂದ ಪಕ್ಕದ ರಾಜ್ಯ ಗೋವಾಗೆ ಹಾಲು, ತರಕಾರಿ ಸೇರಿ ಇನ್ನಿತರ ವಸ್ತುಗಳು ರವಾನೆ ಆಗುವುದು ಗೊತ್ತೇ ಇದೆ. ಆದರೆ, ಈಗ ಬೆಳಗಾವಿಯಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನೂ ಕಳಿಸಿರುವುದು ವಿಶೇಷವಾಗಿದೆ.
ಹೌದು, ಗೋವಾ ರಾಜ್ಯದ ಜನರು ಹಾಲು, ತರಕಾರಿ ಸೇರಿ ಮತ್ತಿತರ ದಿನಸಿಗಳಿಗೆ ಕರ್ನಾಟಕ ರಾಜ್ಯವನ್ನು ನೆಚ್ಚಿಕೊಂಡಿದ್ದಾರೆ. ಅದರಲ್ಲೂ ಬೆಳಗಾವಿಯಿಂದ ಬಹಳಷ್ಟು ಸಾಮಗ್ರಿಗಳು ಗೋವಾಗೆ ರಪ್ತಾಗುತ್ತವೆ. ಈಗ ಬೆಳಗಾವಿ ಮಹಾನಗರ ಪಾಲಿಕೆ ಸಂಗ್ರಹಿಸಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಗೋವಾಗೆ ಕಳಿಸಿರುವುದು ಎಲ್ಲರ ಗಮನ ಸೆಳೆದಿದೆ. ಇದರಿಂದ ಬೆಳಗಾವಿ ಕಸಕ್ಕೆ ಗೋವಾದಲ್ಲಿ ಫುಲ್ ಡಿಮ್ಯಾಂಡ್ ಬಂದಿದ್ದು, ಇದೇ ಭಾನುವಾರ ಗೋವಾದ ಖಾಸಗಿ ಕಂಪನಿಯೊಂದು ಖಾಸಭಾಗದಲ್ಲಿರುವ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರದಿಂದ 6 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದುಕೊಂಡು ಹೋಗಿದೆ.
ಬೆಳಗಾವಿಯಲ್ಲಿ ಪ್ರತಿನಿತ್ಯ ಎಲ್ಲಾ ಸೇರಿ ಒಟ್ಟು 250 ಟನ್ ಕಸ ಸಂಗ್ರಹವಾಗುತ್ತದೆ. ಇಷ್ಟು ಗಾತ್ರದ ಕಸ ವಿಲೇವಾರಿ ಪಾಲಿಕೆಗೆ ದೊಡ್ಡ ಸವಾಲಿನ ಕೆಲಸ. ಹಾಗಾಗಿ, ಗೋವಾದ ಖಾಸಗಿ ಕಂಪನಿಯೊಂದು ಪ್ಲಾಸ್ಟಿಕ್ ತ್ಯಾಜ್ಯವನ್ನು ತಾವೇ ಒಯ್ಯುತ್ತಿರುವುದು ಪಾಲಿಕೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಪಾಲಿಕೆ ಪರಿಸರ ವಿಭಾಗದ ಎಇಇ ಹನುಮಂತ ಕಲಾದಗಿ, "ಬೆಳಗಾವಿ ಪಾಲಿಕೆ ವ್ಯಾಪ್ತಿಯ 8 ಕಡೆಗಳಲ್ಲಿ ತ್ರಿಬಲ್ ಆರ್ ಸೆಂಟರ್ ಸ್ಥಾಪಿಸಲಾಗಿದ್ದು, ನಗರದಲ್ಲಿ ಸಂಗ್ರಹಿಸಿರುವ ಪ್ಲಾಸ್ಟಿಕ್, ಸಾರಾಯಿ ಬಾಟಲಿ, ಹಳೆ ಚಪ್ಪಲಿ, ಬಟ್ಟೆಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಈ ತ್ಯಾಜ್ಯವನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಗೋವಾದ ತಂಡವೊಂದು ಬೆಳಗಾವಿಗೆ ಬಂದು ಪರೀಕ್ಷಿಸಿದಾಗ, 2,500 ಕಿಲೋ ಎನರ್ಜಿ ಕ್ಯಾಲೋರಿ ಬಂದಿದೆ. ಇದಕ್ಕೆ ಗೋವಾದಲ್ಲಿ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ತಮ್ಮ ವಾಹನಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಈಗ ಉಚಿತವಾಗಿ ಕೊಟ್ಟಿರುವ ಕಸ ಮುಂದೆ ಪಾಲಿಕೆಗೆ ಆದಾಯ ತಂದು ಕೊಡುವುದರಲ್ಲಿ ಸಂಶಯವೇ ಇಲ್ಲ" ಎಂದರು.
ಪಾಲಿಕೆ ಆರೋಗ್ಯ ನಿರೀಕ್ಷಕಿ ಶಿಲ್ಪಾ ಕುಂಬಾರ ಮಾತನಾಡಿ, "ಸ್ಥಳೀಯ ಖಾಸಗಿ ಕಂಪನಿಗೆ ತ್ಯಾಜ್ಯವನ್ನು ನೀಡುತ್ತಿದ್ದೆವು. ಇದೇ ಮೊದಲ ಬಾರಿಗೆ ಗೋವಾ ರಾಜ್ಯಕ್ಕೆ ಕಳುಹಿಸಿದ್ದೇವೆ. ಈಗಾಗಲೇ ಬಯೋಗ್ಯಾಸ್, ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸುತ್ತಿದ್ದು, ಪಾಲಿಕೆ ಆಯುಕ್ತರ ನಿರ್ದೇಶನದಂತೆ ಹೊಸ ಹೊಸ ಪ್ರಯೋಗ ಮಾಡುತ್ತಿದ್ದೇವೆ. ಈಗ ಗೋವಾಗೆ ಒಯ್ದಿರುವ ತ್ಯಾಜ್ಯವನ್ನು ಪೇಪರ್ ತಯಾರಿಸಲು ಕಚ್ಚಾ ವಸ್ತುಗಳನ್ನಾಗಿ ಬಳಸಲು ಅವರು ಯೋಜಿಸಿದ್ದಾರೆ" ಎಂದು ಮಾಹಿತಿ ನೀಡಿದ್ರು.
ಒಟ್ಟಿನಲ್ಲಿ ಕಸದಿಂದ ರಸ ತೆಗೆಯುವ ಕೆಲಸಕ್ಕೆ ಮುಂದಾಗಿರುವ ಬೆಳಗಾವಿ ಮಹಾನಗರ ಪಾಲಿಕೆ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಪ್ಲಾಸ್ಟಿಕ್ನಿಂದ ಟೈಲ್ಸ್ ತಯಾರಿಕೆ: ಪಾಲಿಕೆಯ ಕಸ ಸಂಗ್ರಹಣ ಘಟಕದಲ್ಲಿ ಹೊಸ ಪ್ರಯೋಗ