ಬೆಳಗಾವಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ‘ಕೈ’ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದೆ. ಕೆಪಿಸಿಸಿಯಿಂದ ಹೈಕಮಾಂಡ್‍ಗೂ ಸತೀಶ್ ಒಬ್ಬರ ಹೆಸರನ್ನೇ ಶಿಫಾರಸು ಮಾಡಲಾಗಿದೆ. ಬಲಾಡ್ಯ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯ ಪ್ರಬಲ ಅಭ್ಯರ್ಥಿ ಯಾರಾಗ್ತಾರೆ ಎಂಬುದೀಗ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಈ ಸಭೆಯಲ್ಲಿ ಐವರ ಹೆಸರನ್ನು ಕೇಂದ್ರ ಬಿಜೆಪಿ ಚುನಾವಣೆ ಸಮಿತಿಗೆ ಶಿಫಾರಸು ಮಾಡಲಾಗಿದೆ. ಅಲ್ಲದೇ ಸಭೆಯಲ್ಲಿ ದಿ. ಸುರೇಶ್ ಅಂಗಡಿ ಕುಟುಂಬವನ್ನು ಪರಿಗಣಿಸಬೇಕು ಎಂಬುದರ ಬಗ್ಗೆಯೂ ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ.
ಇದರ ಜೊತೆಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ, ನ್ಯಾಯವಾದಿ ಹಾಗೂ ಬಿಜೆಪಿ ವಕ್ತಾರ ಎಂ.ಬಿ ಝಿರಲಿ, ಖ್ಯಾತ ವೈದ್ಯ ಡಾ.ಗಿರೀಶ್ ಸೋನವಾಲ್ಕರ್, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ರವಿ ಪಾಟೀಲ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಆದರೆ, ಜಿಲ್ಲೆಯಲ್ಲಿ ಹಿಡಿತ ಹೊಂದಿರುವ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯ ಪ್ರಬಲ ಅಭ್ಯರ್ಥಿ ಯಾರಾಗ್ತಾರೆ ಎಂಬುವುದೇ ಇದೀಗ ಕುತೂಹಲ ಮೂಡಿಸಿದೆ.
ಸತೀಶ್ ಕಣಕ್ಕೀಳಿಯುವುದು ನಿಶ್ಚಿತ! : 2028ರ ನಂತರ ಮುಖ್ಯಮಂತ್ರಿ ಹುದ್ದೆಗೆ ನಾನೂ ಆಕಾಂಕ್ಷಿ ಎಂದು ಹಲವು ಸಲ ಹೇಳಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಹೈಕಮಾಂಡ್ ಆದೇಶಕ್ಕೆ ತಲೆಭಾಗುವ ಸಾಧ್ಯತೆ ದಟ್ಟವಾಗಿದೆ. ಹೈಕಮಾಂಡ್ ನಿರ್ದೇಶನದ ಮೇರೆಗೆ ಸತೀಶ್ ಈ ಸಲದ ಉಪಚುನಾವಣೆಯಲ್ಲಿ ಕಣಕ್ಕಿಳಿಯುವುದು ನಿಶ್ಚಿತ ಎನ್ನಲಾಗುತ್ತಿದೆ.
ರಾಷ್ಟ್ರರಾಜಕಾರಣಕ್ಕೆ ಪ್ರವೇಶಿಸಿದರೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಂಕಾ ವಾದ್ರಾ ಅವರಿಗೆ ಹತ್ತಿರವಾಗಬಹುದು. ಅಲ್ಲದೇ ಹೈಕಮಾಂಡ್ ನಾಯಕರ ಉತ್ತಮ ಒಡನಾಟ ಹೊಂದಿರುವ ಮುಖಂಡರ ಸಂಪರ್ಕ ಸಾಧಿಸಲು ನೆರವಾಗಬಹುದು ಎಂಬ ಕಾರಣಕ್ಕೆ ಸತೀಶ್ ಉಪ ಸಮರಕ್ಕೆ ಸ್ಪರ್ಧಿಸಲು ಒಲವು ತೋರಿದ್ದಾರೆ.
ಹೈಕಮಾಂಡ್ ನಾಯಕರ ವಿಶ್ವಾಸ ಗಳಿಸಿದರೆ ಮುಂದೆ ಸಿಎಂ ಅಭ್ಯರ್ಥಿ ಆಗಲು ನೆರವಾಗಬಹುದು ಎಂಬುವುದು ಸತೀಶ್ ಜಾರಕಿಹೊಳಿ ಲೆಕ್ಕಾಚಾರವಾಗಿದೆ. ಈ ಕಾರಣಕ್ಕೆ ದೆಹಲಿಗೆ ತೆರಳಲಿರುವ ಸತೀಶ್ ಜಾರಕಿಹೊಳಿ ಒಂದು ವೇಳೆ ತಾನು ಗೆದ್ದರೆ ಯಮಕನಮರಡಿ ಕ್ಷೇತ್ರದ ಉಪಚುನಾವಣೆಯಲ್ಲಿ ಪುತ್ರಿ ಪ್ರಿಯಂಕಾ ಇಲ್ಲವೇ ಸಹೋದರ ಲಖನ್‍ಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿಯಿಂದ ಜಾತಿ ಸಮೀಕರಣ? : ಜಾತಿ ಸಮೀಕರಣ ಆಧಾರದ ಮೇಲೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಲಿಂಗಾಯತ ಪಂಚಮಸಾಲಿ ಸಮಾಜದ ಕೊಡುಗೆಯೂ ಹೆಚ್ಚಿದೆ. ಅಲ್ಲದೇ ಇತ್ತೀಚೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕು ಎಂದು ದೊಡ್ಡಮಟ್ಟದ ಪಾದಯಾತ್ರೆ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಾಗೂ ಉಪವಾಸ ಧರಣಿ ನಡೆಸಲಾಗಿತ್ತು.
ಪಕ್ಷದ ಜೊತೆಗೆ ಪಂಚಮಸಾಲಿ ಸಮಾಜ ಇರಬೇಕೆಂದರೆ ಉಪಚುನಾವಣೆಯಲ್ಲಿ ಪಂಚಮಸಾಲಿ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ನಾಯಕರು ಚಿಂತನೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಪಕ್ಷದ ಜೊತೆಗಿರುವ ನ್ಯಾಯವಾದಿ ಎಂ ಬಿ ಝಿರಲಿ, ವೈದ್ಯರಾದ ಡಾ.ವಿಶ್ವನಾಥ ಪಾಟೀಲ ಹಾಗೂ ಡಾ.ರವಿ ಪಾಟೀಲ ಹೆಸರು ಟಿಕೆಟ್ ವಿಚಾರಕ್ಕೆ ಮುಂಚೂಣಿಗೆ ಬಂದಿವೆ. ಅಲ್ಲದೇ ತನಗೂ ಟಿಕೆಟ್ ನೀಡುವಂತೆ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಕೂಡ ಬೇಡಿಕೆ ಇಟ್ಟಿದ್ದಾರೆ.
ಆರೇಳು ತಿಂಗಳ ನಂತರ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಈ ಕಾರಣಕ್ಕೆ ಪಂಚಮಸಾಲಿ ಹೊರತುಪಡಿಸಿ ಅಚ್ಚರಿ ಅಭ್ಯರ್ಥಿ ಘೋಷಿಸಿಸುವುದಾದರೆ ಲಿಂಗಾಯತ ರೆಡ್ಡಿ ಸಮುದಾಯದ ಡಾ.ಗಿರೀಶ್ ಸೋನವಾಲ್ಕರ್ ಹಾಗೂ ಲಿಂಗಾಯತರಲ್ಲದ ಸಮುದಾಯಕ್ಕೆ ಟಿಕೆಟ್ ನೀಡಲು ತೀರ್ಮಾನಿಸಿದರೆ ಮಾಜಿ ಶಾಸಕ ಸಂಜಯ್ ಪಾಟೀಲ ಹೆಸರು ಚಾಲ್ತಿಗೆ ಬರಲಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸತೀಶ್‌ಗೆ ಟಫ್ ಫೈಟ್ ಕೊಡುವವರ್ಯಾರು?: ಎರಡೂವರೆ ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸತೀಶ್ ಜಾರಕಿಹೊಳಿ ಎರಡು ಸಲ ಬೆಳಗಾವಿ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಸತೀಶ್ ಟಫ್ ಫೈಟ್ ಕೊಡಬಲ್ಲ ಕ್ಯಾಂಡಿಡೇಟ್ ಯಾರಾಗಬಹುದು ಎಂಬ ಬಗ್ಗೆ ಬಿಜೆಪಿ ನಾಯಕರು ಗಂಭೀರವಾಗಿ ಹುಡುಕಾಡುತ್ತಿದ್ದಾರೆ.
5 ಬಾರಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಹಾಗೂ ಕಳೆದ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಸ್ಪರ್ಧಿಸುವ ಇಚ್ಛೆ ಹೊಂದಿ ಟಿಕೆಟ್ ವಂಚಿತರಾಗಿರುವ ರಮೇಶ್ ಕತ್ತಿ ಕೂಡ ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದಾರೆ. ಸತೀಶ್‌ಗೆ ಟಫ್ ಫೈಟ್ ಕೊಡಬಲ್ಲ ಅಭ್ಯರ್ಥಿಗಳ ಪಟ್ಟಿಯಲ್ಲಿ ರಮೇಶ್ ಕತ್ತಿ ಹೆಸರೇ ಮುಂಚೂಣಿಯಲ್ಲಿದೆ. ಅಲ್ಲದೇ ಇವರ ಸಹೋದರರೂ ಆಗಿರುವ ಉಮೇಶ್ ಕತ್ತಿ ಹಾಲಿ ಸಚಿವರಾಗಿದ್ದು, ಜಿಲ್ಲಾ ರಾಜಕಾರಣದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಇದು ರಮೇಶ್ ಕತ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಇನ್ನು, ತನಗೊಂದು ಅವಕಾಶ ನೀಡಿ ಎಂದು ಸರ್ಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಬೇಡಿಕೆ ಇಟ್ಟಿದ್ದಾರೆ. ಬಲಾಢ್ಯ ಸತೀಶ್ ಜಾರಕಿಹೊಳಿ ಮಣಿಸಲು ಬಿಜೆಪಿ ಅನುಕಂಪದ ಅಸ್ತ್ರವನ್ನೂ ಪ್ರಯೋಗಿಸುವ ಸಾಧ್ಯತೆ ದಟ್ಟವಾಗಿದೆ.
ಇದಕ್ಕಾಗಿ ಸುರೇಶ್ ಅಂಗಡಿ ಅವರ ಪುತ್ರಿ ಶ್ರದ್ಧಾ ಶೆಟ್ಟರ್ ಅವರನ್ನೇ ಕಣಕ್ಕಿಳಿಸುವ ಬಗ್ಗೆ ನಾಯಕರು ಚರ್ಚಿಸುತ್ತಿದ್ದಾರೆ. ಶ್ರದ್ಧಾ ಕಣಕ್ಕಿಳಿದರೆ ಸಹಜವಾಗಿ ಬಿಜೆಪಿಗೆ ಲಾಭವಾಗಲಿದೆ ಎಂಬ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿದೆ. ಮತ್ತೊಂದೆಡೆ ಸುರೇಶ್ ಅಂಗಡಿ ಅವರಿಗೆ ಕ್ಷೇತ್ರದಲ್ಲಿ ಸಾಕಷ್ಟು ಜನ ಬೆಂಬಲ ಇತ್ತು. ಅಲ್ಲದೇ ಸುರೇಶ್ ಅಂಗಡಿ ನಿಧನದ ಬಳಿಕ ಶ್ರದ್ಧಾ ಕೂಡ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ.
ಈ ಕಾರಣಕ್ಕೆ ಕೋರ್ ಕಮಿಟಿ ಸದಸ್ಯರಾಗಿರುವ ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್ ಸೇರಿ ಹಲವರು ಅಂಗಡಿ ಕುಟುಂಬಕ್ಕೆ ಅವಕಾಶ ಕೊಟ್ಟರೆ ಬಿಜೆಪಿಗೆ ಲಾಭವಾಗಲಿದೆ ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಹೈಕಮಾಂಡ್ ನಿರ್ಣಯದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ.