ಬೆಳಗಾವಿ: ಮೈತ್ರಿ ಸರ್ಕಾರದ ಪತನದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಬೆಂಗಳೂರು ನಂತರ ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿಯೇ ನಡೆಯುತ್ತಿದೆ.
2008ರಲ್ಲಿ ಜೆಡಿಎಸ್ ತೊರೆದು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡ ಈ ಬಾರಿ ಬಿಎಸ್ ವೈ ಸಂಪುಟ ಸೇರುವ ರೇಸ್‍ನ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಉಮೇಶ ಕತ್ತಿ ಅತಿ ಹೆಚ್ಚು ಸಲ ಗೆಲುವು ದಾಖಲಿಸಿದ ಶಾಸಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಇವರ ಸಹೋದರ ರಮೇಶ್ ಕತ್ತಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು.
ಆಗಲೇ ಪಕ್ಷ ತೊರೆಯಲು ನಿರ್ಧರಿಸಿದ್ದ ಕತ್ತಿ ಸಹೋದರರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವೊಲಿಸಿದ್ದರು. ಉಮೇಶ ಕತ್ತಿ, ಯಡಿಯೂರಪ್ಪ ಅವರ ಆಪ್ತ ಆಗಿರುವುದರಿಂದ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇನ್ನು ಮೈತ್ರಿ ಸರ್ಕಾರ ಉರಳಿಸಿದ ರಮೇಶ್ ಜಾರಕಿಹೊಳಿ ಅನರ್ಹರಾಗಿದ್ದು, ಇವರ ಬದಲಿಗೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಆರಂಭಿಕ ಹಂತದಲ್ಲಿ ಸಚಿವ ಸ್ಥಾನ ಸಿಗುವುದು ಖಚಿತ ಎನ್ನುತ್ತಿವೆ ಬಿಜೆಪಿ ಮೂಲಗಳು.
ಇವರ ಜತೆಗೆ ಮಹಿಳಾ ಹಾಗೂ ಲಿಂಗಾಯತ ಕೋಟಾದಡಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಜೈನ ಸಮುದಾಯದಿಂದ ಬಿಜೆಪಿಯಿಂದ ಆಯ್ಕೆಯಾಗಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಸಂಪುಟ ಸೇರಲು ಕಸರತ್ತು ನಡೆಸಿದ್ದಾರೆ. ಇನ್ನು ಬಿಜೆಪಿಯಿಂದ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಸವದತ್ತಿ ಶಾಸಕ ಆನಂದ ಮಾಮನಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆಗೆ ಹಿರಿತನ ಆಧಾರದ ಮೇಲೆ ಲಕ್ ಕುಲಾಯಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಆದರೆ ಮೊದಲ ಹಂತದಲ್ಲಿ ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.
ಕಾನೂನು ಹೋರಾಟದಲ್ಲಿ ಗೆದ್ದರೆ ಅತೃಪ್ತರಿಗೆ ಲಕ್!
ಕಾಂಗ್ರೆಸ್ ವಿರುದ್ಧ ಬಂಡೆದಿದ್ದು, ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಅನರ್ಹರಾಗಿದ್ದಾರೆ. ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರೆಲ್ಲರೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಇನ್ನೂ ವಿಚಾರಣೆ ಹಾಗೂ ತೀರ್ಪು ಬರುವುದು ಬಾಕಿ ಇದೆ. ತೀರ್ಪು ಬಂದು ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದರೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸಂಪುಟ ಸೇರುವ ಸಾಧ್ಯತೆಯಿದೆ. ರಮೇಶ್ ಸಂಪುಟ ಸೇರಿದ್ರೆ ಆಗ ಬಾಲಚಂದ್ರ ಜಾರಕಿಹೊಳಿ ಅನಿವಾರ್ಯವಾಗಿ ಸಂಪುಟದಿಂದ ಹೊರಬರುವ ಸನ್ನಿವೇಶ ಬರುತ್ತೆ ಅನ್ನೋ ಲೆಕ್ಕಾಚಾರ ಜಿಲ್ಲೆಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.