ಬೆಳಗಾವಿ: ಲೋಕಸಭೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಇಂದು ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು, ಚುನಾವಣಾ ಅಧಿಕಾರಿ ಡಾ.ಹರೀಶ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಕೋವಿಡ್ ಹಿನ್ನೆಲೆ ಅತ್ಯಂತ ಸರಳವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮಂಗಳಾ ಅಂಗಡಿ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಕೆ. ಎಸ್. ಈಶ್ವರಪ್ಪ ಜೊತೆಗೆ ಮೊದಲ ನಾಮಪತ್ರ ಸಲ್ಲಿಸಿದರು.
ಬಳಿಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರೊಂದಿಗೆ ಬಂದು ಎರಡನೇ, ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ್ ಬೆನಕೆ ಜೊತೆಗೆ ಮೂರನೇ ನಾಮಪತ್ರ, ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಗೆ ನಾಲ್ಕನೇ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಮಂಗಾಳಾ ಅಂಗಡಿ ಟೆಂಪಲ್ ರನ್ ಮಾಡಿದರು. ನಾಮಪತ್ರ ಸಲ್ಲಿಕೆಯ ಬಳಿಕ ಸಿಎಂ ವಾಹನದಲ್ಲೇ ತೆರಳಿದ ಅವರು ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡರು. ಈ ವೇಳೆ ಸಚಿವ ಜಗದೀಶ್ ಶೆಟ್ಟರ್ ಸಾಥ್ ನೀಡಿದರು.
ಸಿಎಂ ಆಶೀರ್ವಾದ ಪಡೆದ ಶೆಟ್ಟರ್ ಪತ್ನಿ, ಸೊಸೆ:
ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳಗಾವಿಯ ಡಿಸಿ ಕಚೇರಿಗೆ ಆಗಮಿಸಿದ ಸಿಎಂ ಅವರನ್ನು ಸಚಿವ ಜಗದೀಶ್ ಶೆಟ್ಟರ್ ದಂಪತಿ, ಸುರೇಶ್ ಅಂಗಡಿಯವರ ಪುತ್ರಿಯರಾದ ಸ್ಪೂರ್ತಿ, ಶ್ರದ್ಧಾ ಭೇಟಿಯಾದರು. ನಂತರ ಡಿಸಿ ಕಚೇರಿ ಆವರಣದ ಎದುರೇ ಸಿಎಂ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.