ಬೆಳಗಾವಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ಜೂನ್ 20ರಂದು ಬೆಳಗಾವಿ ಬಂದ್ಗೆ ಕರೆ ನೀಡಲಾಗಿದೆ. ಈ ಬಗ್ಗೆ ಅನಾಮಧೇಯ ವಾಟ್ಸ್ ಆ್ಯಪ್ ನಂಬರ್ ಮೂಲಕ ಯುವಕರಿಗೆ ಸಂದೇಶ ರವಾನೆ ಮಾಡಲಾಗುತ್ತಿದೆ. ಜೂನ್ 20ರಂದು ಬೆಳಗಾವಿ ಕೋಟೆಕೆರೆ ಆವರಣದಲ್ಲಿ ಜಮಾವನೆಗೊಳ್ಳುವಂತೆ ಸಂದೇಶದಲ್ಲಿ ಕೋರಲಾಗುತ್ತಿದೆ. ಇದರಿಂದ ಉತ್ತರ ವಲಯದ ಏಳು ಜಿಲ್ಲೆಗಳ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಕುಂದಾನಗರಿಯಲ್ಲಿ ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಉತ್ತರ ವಲಯ ವ್ಯಾಪ್ತಿಯ ಏಳು ಜಿಲ್ಲೆಗಳ ಯುವಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಹಿತಕರ ಘಟನೆ ನಡೆಯದಂತೆ ಬೆಳಗಾವಿ ಪೊಲೀಸರು ನಿಗಾ ಇರಿಸಿದ್ದಾರೆ. ಈವರೆಗೆ ಸೇನಾ ಭರ್ತಿಯಲ್ಲಿ ಪಾಲ್ಗೊಂಡವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆಗೈಯ್ಯುತ್ತಿರುವ ಕಿಡಿಗೇಡಿಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಕೆಲ ಪ್ರಭಾವಿಗಳು ಖಾಸಗಿ ವಾಹನಗಳಲ್ಲಿ ಯುವಕರನ್ನು ಬೆಳಗಾವಿಗೆ ಕಳುಹಿಸಿಕೊಡುವ ಯತ್ನ ಮಾಡುತ್ತಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿವೆ. ಈ ಬಗ್ಗೆಯೂ ಏಳು ಜಿಲ್ಲೆಗಳ ವರಿಷ್ಠಾಧಿಕಾರಿಗಳು ನಿಗಾ ಇರಿಸಿದ್ದು, ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಯುವ ಸಮೂಹ ಕೂಡ ಎಚ್ಚರ ತಪ್ಪಿದರೆ ಭವಿಷ್ಯವೇ ಹಾಳಾಗುವ ಸಾಧ್ಯತೆ ಇದೆ. ಅಗ್ನಿಪಥ್ ಜಾರಿ ವಿರೋಧಿಸಿ ಈಗಾಗಲೇ ದೇಶದ ಹಲವು ರಾಜ್ಯಗಳು ಹೊತ್ತಿ ಉರಿಯುತ್ತಿವೆ. ಇಂದು ಕೂಡ ಅಗ್ನಿಪಥ್ ವಿರೋಧಿಸಿ ಜಿಲ್ಲೆಯ ಗೋಕಾಕ್, ನಿಪ್ಪಾಣಿ ಹಾಗೂ ಖಾನಾಪುರ ಪಟ್ಟಣದಲ್ಲಿ ಪ್ರತಿಭಟನೆಗಳು ನಡೆದಿವೆ. ಎಲ್ಲ ಕಡೆಯೂ ಶಾಂತಿಯುತ ಪ್ರತಿಭಟನೆ ನಡೆದಿವೆ. ಬೆಳಗಾವಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ ಕಾರಣಕ್ಕೆ ಜಿಲ್ಲೆಯಲ್ಲಿ ಶಾಂತಿಭಂಗವಾಗಲಿ ಹಾಗೂ ಅಹಿತಕರ ಘಟನೆ ನಡೆದಿಲ್ಲ.
ನಾಳೆ ಶಾಸಕಿ ಅಂಜಲಿ ಸತ್ಯಾಗ್ರಹ: ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ನಾಳೆ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರದಲ್ಲಿ ಸತ್ಯಾಗ್ರಹ ನಡೆಸಲಿದ್ದಾರೆ. ಖಾನಾಪುರ ಪಟ್ಟಣದ ಶಿವ ಸ್ಮಾರಕ ಚೌಕಿನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ. ಧರಣಿಯಲ್ಲಿ ಸೇವಾ ಆಕಾಂಕ್ಷಿಗಳು ಶಾಸಕಿಗೆ ಸಾಥ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿರೋಧಿಸಿ ಪ್ರತಿಭಟನೆ: ವರದಿಗಾರನ ಮೇಲೆ ಹಲ್ಲೆ