ಬೆಳಗಾವಿ: ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ತಮ್ಮ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಡೆತ್‌ನೋಟ್ ವಿವರ: ಸ್ವಾಮೀಜಿ ಬರೆದ ಮರಣ ಪತ್ರದಲ್ಲಿ, 'ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ. ಈ ಲೋಕದ ಗೊಡವೆ ಸಾಕು. ಹಡೆದ ತಾಯಿ ನನ್ನ ಕ್ಷಮಿಸು. ಮಠದ ಭಕ್ತರು ನನ್ನನ್ನು ಕ್ಷಮಿಸಿ. ನನ್ನ ನಡೆ ಮಡಿವಾಳೇಶ್ವರನ ಕಡೆಗೆ. ಮಠದ ಕಮಿಟಿ, ಭಕ್ತರು ಮಠವನ್ನು ಮುನ್ನಡೆಸಿಕೊಂಡು ಹೋಗಬೇಕು' ಎಂದು ಸ್ವಾಮೀಜಿ ಬರೆದಿದ್ದಾರೆ.
ಇದನ್ನೂ ಓದಿ: ನಮ್ಮ ಸ್ವಾಮೀಜಿ ಹಾಲಿನಂತೆ ಪರಿಶುದ್ಧವಾಗಿದ್ದಾರೆ: ಶ್ರೀ ಬಸವ ಪ್ರಭು ಸ್ವಾಮೀಜಿ
ಮೂಲತಃ ನೇಗಿನಹಾಳ ಗ್ರಾಮದ ನಿವಾಸಿಯಾಗಿದ್ದ ಸ್ವಾಮೀಜಿ ಗ್ರಾಮದಲ್ಲಿ ಕಳೆದ ಹದಿನೈದು ವರ್ಷಗಳಿಂದ ಮಠದಲ್ಲಿ ನೆಲೆಸಿದ್ದರು. ಆದ್ರೆ ಕಳೆದ ವಾರ ಮಹಿಳೆಯರಿಬ್ಬರು ಮಾತನಾಡಿರುವ ಆಡಿಯೋದಲ್ಲಿ ಸ್ವಾಮೀಜಿ ಹೆಸರು ಪ್ರಸ್ತಾಪವಾಗಿತ್ತು ಎನ್ನಲಾಗಿದೆ. ಇದರಿಂದ ಶ್ರೀಗಳು ಮನನೊಂದಿದ್ದರಂತೆ. ಹೀಗಾಗಿ, ಆಡಿಯೋದಲ್ಲಿ ಮಾತನಾಡಿದ್ದ ಮಹಿಳೆಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಲಹೊಂಗಲ ಡಿವೈಎಸ್‌ಪಿಗೆ ಎರಡು ದಿನಗಳ ಹಿಂದೆ ಸೋಮಪ್ಪ ಬಾಗೇವಾಡಿ ಎಂಬುವವರು ದೂರು ನೀಡಿದ್ದರು. ದೂರಿನಲ್ಲಿ ಲಿಂಗಾಯತ ಮಠಾಧೀಶರ ಬಗ್ಗೆ ಸುಳ್ಳು ಆಡಿಯೋ ವೈರಲ್ ಮಾಡಲಾಗ್ತಿದೆ. ಮಾತನಾಡಿದ್ದು ಯಾರು ಎಂಬುದರ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿದ್ದರು.
ನಿನ್ನೆ ತಡರಾತ್ರಿವರೆಗೆ ಭಕ್ತರೊಂದಿಗೆ ಸ್ವಾಮೀಜಿ ಚೆನ್ನಾಗಿದ್ದರು. ಆದರೆ, ಇಂದು ಬೆಳಗ್ಗೆ ಭಕ್ತರು ಬಂದು ನೋಡಿದಾಗ ಸ್ವಾಮೀಜಿ ಮಠದಲ್ಲೇ ನೇಣು ಹಾಕಿಕೊಂಡಿದ್ದಾರೆ. ಬೈಲಹೊಂಗಲ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ನಿರವ ಮೌನ ಆವರಿಸಿದೆ.