ಬೆಳಗಾವಿ: ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ಪಕ್ಷದಲ್ಲಿ ಕಾರ್ಯಕರ್ತರಿಗೆ ಸಿಗುವ ಗೌರವ ಯಾವ ಪಕ್ಷದಲ್ಲಿಯೂ ದೊರೆಯಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗೋಕಾಕ್ ನಗರದ ಹೊರವಲಯದಲ್ಲಿರುವ ಗೋಕಾಕ್ ಸಪ್ಲಾಯರ್ ಸಭಾ ಭವನದಲ್ಲಿ ಜರುಗಿದ ಅರಭಾವಿ ಮಂಡಲ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವ ಹೊಸ ಪದಾಧಿಕಾರಿಗಳು ಸಂಘಟನಾತ್ಮಕವಾಗಿ ದುಡಿದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರ ಮುಂದಿಡಬೇಕು. ಬಿಜೆಪಿ ವಿಶ್ವದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷವಾಗಿದೆ. ಈ ಪಕ್ಷವು ಇತರೆ ಪಕ್ಷಗಳಿಗಿಂತ ಭಿನ್ನವಾಗಿದ್ದು, ಕಾರ್ಯಕರ್ತರಿಗೆ ಮನ್ನಣೆ ನೀಡುವ ಏಕೈಕ ಪಕ್ಷವಾಗಿದೆ ಎಂದರು.
![ಗೋಕಾಕ ಸಪ್ಲಾಯರ್ ಸಭಾ ಭವನದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ](https://etvbharatimages.akamaized.net/etvbharat/prod-images/kn-bgm-01-20-bjp-meeting-7201786_20102020092454_2010f_1603166094_397.jpg)
ಅರಭಾವಿ ಮತಕ್ಷೇತ್ರದಲ್ಲಿ ನಾನು ಹಾಗೂ ಈರಣ್ಣ ಕಡಾಡಿ ಸೇರಿಕೊಂಡು ಅಭಿವೃದ್ಧಿ ಮಾಡುತ್ತೇವೆ. ಇಡೀ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಯ ಎಲ್ಲಾ ಜಿಲ್ಲಾ ನಾಯಕರು ಶ್ರಮಿಸುತ್ತೇವೆ. ಎಂಎಲ್‍ಸಿ ಆಕಾಂಕ್ಷಿಯಾಗಿದ್ದ ಈರಣ್ಣ ಕಡಾಡಿಯವರಿಗೆ ಕಲ್ಲೋಳಿ ಹನುಮಂತ ದೇವರ ಆಶೀರ್ವಾದದಿಂದ ರಾಜ್ಯಸಭೆ ಸದಸ್ಯ ಸ್ಥಾನ ದೊರೆತಿರುವುದು ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ. ಕ್ಷೇತ್ರದ ಜನತೆಯ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸರ್ವಾಂಗೀಣ ಪ್ರಗತಿಗೆ ಎಲ್ಲರೂ ಒಂದಾಗಿ ದುಡಿಯುತ್ತೇವೆ ಎಂದು ತಿಳಿಸಿದರು.
ಸುರೇಶ ಅಂಗಡಿ ಅವರು ಅಗಲಿರುವುದು ನಮಗೆಲ್ಲ ಅಪಾರ ನೋವಾಗಿದೆ. ಸರಳ ಸಜ್ಜನ ವ್ಯಕ್ತಿಯಾಗಿದ್ದ ಅಂಗಡಿಯವರು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದರು. ಜತೆಗೆ ನನಗೆ ಒಳ್ಳೆಯ ಸ್ನೇಹಿತರಾಗಿದ್ದರು. ಡಿಸೆಂಬರ್ ಅಂತ್ಯದೊಳಗೆ ಬೆಳಗಾವಿ ಲೋಕಸಭಾ ಚುನಾವಣೆ ನಡೆಯಬಹುದು. ಈಗಿಂದಲೇ ಕಾರ್ಯಕರ್ತರು ಸನ್ನದ್ಧರಾಗಬೇಕು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಜಯಶಾಲಿಯನ್ನಾಗಿ ಮಾಡುವ ಮೂಲಕ ದಿ. ಸುರೇಶ್ ಅಂಗಡಿಯವರ ಆತ್ಮಕ್ಕೆ ಚಿರಶಾಂತಿ ನೀಡಬೇಕು ಎಂದು ಕಾರ್ಯಕರ್ತರಿಗೆ ಕೋರಿದರು.