ಬೆಳಗಾವಿ: ತಾವು ಅಧಿಕಾರ ಅನುಭವಿಸುತ್ತಿರುವುದು ವಲಸಿಗ ಶಾಸಕರ ತ್ಯಾಗದಿಂದ ಎಂಬುದನ್ನು ಮರೆಯಬೇಡಿ ಎಂದು ಜಿಲ್ಲೆಯ ಬಿಜೆಪಿ ನಾಯಕರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.
ನಗರದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಬ್ರದರ್ಸ್ ಬಿಟ್ಟು ಸಭೆ ಮಾಡಿದವರಿಗೆ ಗೋಕಾಕ್ ನಗರದಲ್ಲಿ ತಿರುಗೇಟು ನೀಡಿದ ಅವರು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ನಾನು ತೊಡಗಿಲ್ಲ, ರಮೇಶ್ ಜಾರಕಿಹೊಳಿಯೂ ಭಾಗಿಯಾಗಿಲ್ಲ. ಪವರ್ ಎಂಜಾಯ್ ಮಾಡುವರಲ್ಲಿ ನಾನು ಒಂದು ವಿನಂತಿ ಮಾಡುತ್ತೇನೆ. ತಾವು ರಮೇಶ್ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ್ ಇವರ ತ್ಯಾಗದಿಂದ ತಾವು ಪವರ್ ಎಂಜಾಯ್ ಮಾಡುತ್ತಿದ್ದೀರಿ. ಅದನ್ನು ತಾವು ಯಾರೂ ಮರೆಯಬಾರದು ಎಂದರು.
17 ಶಾಸಕರು ಬಿಜೆಪಿಗೆ ಬರದೇ ಇದ್ದಿದ್ರೆ ಯಾರೂ ಮಂತ್ರಿಯೂ ಆಗ್ತಿರಲಿಲ್ಲ. ರಾಜ್ಯಸಭಾ ಸದಸ್ಯರೂ ಆಗ್ತಿರಲಿಲ್ಲ. ಯಾರೂ ಉಪಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ ಎನ್ನುವ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದ ಲಕ್ಷ್ಮಣ್ ಸವದಿ, ಉಮೇಶ್ ಕತ್ತಿ, ಸಂಸದ ಅಣ್ಣಾಸಾಬ್ ಜೊಲ್ಲೆಗೆ ಬಾಲಚಂದ್ರ ಜಾರಕಿಹೊಳಿ ಪರೋಕ್ಷವಾಗಿ ಟಾಂಗ್ ನೀಡಿದರು.
ಇವರು ಬಂದಿದ್ದಕ್ಕೆ ತಾವೆಲ್ಲರೂ ಇಂದು ಅಧಿಕಾರ ಅನುಭವಿಸುತ್ತಿರುವಿರಿ. ದಯಮಾಡಿ ತಾವೆಲ್ಲರೂ ಈ ಹದಿನೇಳು ಜನರನ್ನು ಮರಿಬೇಡಿ. ಬಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡೋಣ. ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೋ? ಇಲ್ಲವೋ? ಎಂಬುದು ನನಗೆ ಗೊತ್ತಿಲ್ಲ. ಆದಷ್ಟು ಬೇಗ ನಮ್ಮ ಮುಖಂಡರೆಲ್ಲರೂ ಸೇರಿ ಈ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿಯನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟುತ್ತೇವೆ. ರಮೇಶ್ ಜಾರಕಿಹೊಳಿ, ನಾನು, ಸವದಿ, ಕತ್ತಿ, ಜೊಲ್ಲೆ ಎಲ್ಲರೂ ಸೇರಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಮುಂದೆಯೂ ನಾವೆಲ್ಲರೂ ಬಿಜೆಪಿಯಲ್ಲೇ ಇರುತ್ತೇವೆ. ಮತ್ತೆ ಸರ್ಕಾರ ತರುವ ಆಸೆಯೂ ನಮಗಿದೆ. ಮುಂದೆ ಈ ರೀತಿಯ ಭಿನ್ನಾಭಿಪ್ರಾಯ ಆಗಬಾರದು. ಕೆಲವೊಂದಿಷ್ಟು ಜನ ಬಾಲಚಂದ್ರ ಜಾರಕಿಹೊಳಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿರಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಯಾರು ಹಬ್ಬಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.
ಆದರೆ, ನಾನು 2023ರ ಚುನಾವಣೆಗೆ ಅರಭಾವಿ ಕ್ಷೇತ್ರದಿಂದ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಬೇಕಾದರೆ ನಿಮಗೆ ಬಾಂಡ್ ಮೇಲೆ ಬರೆದು ಕೊಡುತ್ತೇನೆ. ಬಿಜೆಪಿ ಬಿಟ್ಟು ಬೇರೆ ಪಕ್ಷದಿಂದ ನಾನು ಸ್ಪರ್ಧೆ ಮಾಡುವುದಿಲ್ಲ. ವಿಧಾನ ಪರಿಷತ್ ಚುನಾವಣೆ ವೇಳೆ ಶುರುವಾದ ಭಿನ್ನಾಭಿಪ್ರಾಯವನ್ನು ಎಲ್ಲರೂ ಸೇರಿ ಬಗೆಹರಿಸಿಕೊಳ್ಳುತ್ತೇವೆ. ಆದಷ್ಟು ಬೇಗ ಎಲ್ಲರೂ ಒಗ್ಗೂಡಿ ಹೋಗುವ ಪ್ರಯತ್ನ ಮಾಡುತ್ತೇವೆ ಎಂದರು.
ಸಭೆ ಅಧಿಕೃತವೋ? ಅನಧಿಕೃತವೋ? ಪಕ್ಷದ ಮುಖಂಡರೇ ಹೇಳಬೇಕು: ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ ಅಧಿಕೃತವೋ? ಅನಧಿಕೃತವೋ? ಎಂಬುದನ್ನು ಪಕ್ಷದ ನಾಯಕರೇ ಹೇಳಬೇಕು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪಿ. ರಾಜೀವ್ ಅಧಿಕೃತ ಬಿಜೆಪಿ ಸಭೆ ಅಲ್ಲ ಅಂದಿದ್ದರು. ಉಮೇಶ್ ಕತ್ತಿಯವರ ಹೇಳಿಕೆ ನೋಡಿದ್ದೇನೆ. ಪಕ್ಷದ ಸಭೆ ಅಂದ್ರೆ ಜಿಲ್ಲಾಧ್ಯಕ್ಷರು ಸೇರಿ ಎಲ್ಲರೂ ಇರುತ್ತಾರೆ.
ನನಗೆ ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿಗೆ ಆಹ್ವಾನ ಬಂದಿಲ್ಲ. ಈ ಸಭೆ ಅಧಿಕೃತವೋ? ಅನಧಿಕೃತವೋ? ಪಕ್ಷದಿಂದ ಹೇಳಬೇಕು. ಇದನ್ನ ದೊಡ್ಡದು ಮಾಡಲು ಹೋಗಲ್ಲ. ಒಂದು ವರ್ಷ ಬಿಟ್ಟು ಚುನಾವಣೆ ಎದುರಾಗಲಿದೆ. ಹೈಕಮಾಂಡ್‌ಗೆ ಒಬ್ಬರಿಗೊಬ್ಬರು ದೂರು ಕೊಡಲು ಟೈಮೂ ಇಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ನಡೆಯುತ್ತಿರುವುದು ಪಕ್ಷದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನು ನಾನೂ ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.
ಓದಿ: ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ: ಬಜೆಟ್ನಲ್ಲಿ ಅನುದಾನ ನೀಡುವಂತೆ ಮನವಿ