ಬೆಳಗಾವಿ : ಬೆಳಗಾವಿಯಲ್ಲಿ ಆರಂಭವಾದ ಹೋರಾಟ ರಾಜ್ಯದ ಮೂಲೆ ಮೂಲೆಯಲ್ಲಿಯೂ ನಡೆಯಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ 28 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಕರೆ ನೀಡಿದರು.
ಬೆಳಗಾವಿಯ ಮಾಲಿನಿಸಿಟಿ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಾಕಷ್ಟು ಭರವಸೆ ಮೂಡಿಸಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಭೀಕರ ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿದ್ದರೂ ಪರಿಹಾರ ಕೊಡುವ ಕುರಿತು ತುಟಿ ಪಿಟಕ್ ಎನ್ನುತ್ತಿಲ್ಲ. ಆದರೆ, ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ರೂ. ಕೊಡುವುದಾಗಿ ಸಿಎಂ ಹೇಳಿದ್ದಾರೆ.
ಕಬ್ಬು ಬೆಳೆಗಾರರಿಗೆ ಎಕರೆಗೆ 25 ಸಾವಿರ, ದ್ರಾಕ್ಷಿಗೆ 50 ಸಾವಿರ ಕೊಡುವಂತೆ ಮನವಿ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಇಲ್ಲಿಯೇ ಉತ್ತರ ಕೊಡಬೇಕು ಎಂದು ಸುವರ್ಣ ವಿಧಾನಸೌಧವನ್ನು ಯಡಿಯೂರಪ್ಪ ನಿರ್ಮಿಸಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಮಧ್ಯಂತರ ಪರಿಹಾರ ಕೊಡುತ್ತಾರೆ ಎಂದು ಭಾವಿಸಿಕೊಂಡಿದ್ದೆವು. ಆದರೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ರೈತರ ಸಾಲ ವಸೂಲಿಗೆ ಬ್ಯಾಂಕ್ಗಳು ಇಳಿದಿವೆ. ಇದನ್ನು ಕೂಡಲೇ ನಿಲ್ಲಿಸಬೇಕು. ರೈತರ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ನೀಡಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದರು.
ಭ್ರಷ್ಟಾಚಾರ ತಾಂಡವವಾಡುತ್ತಿದೆ: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಪ್ರಧಾನಿ ಮೋದಿ ನಾಯಕತ್ವಕ್ಕೆ ಸರಿಸಮಾನವಾಗಿ ಕಾಂಗ್ರೆಸ್ನಲ್ಲಿ ಯಾರೂ ಇಲ್ಲ. ರೈತರ ಸಾಲ ಮನ್ನಾ ಮಾಡುವ ನಿರ್ಣಯ ಮುಖ್ಯಮಂತ್ರಿ ಕೈಗೊಳ್ಳದಿದ್ದರೆ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ, ರೈತರ ಬೆನ್ನೆಲುಬಾಗಿ ನಿಲ್ಲುತ್ತೇನೆ. ಹತ್ತು ಸಾವಿರ ರೂ. ಕೊಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಾಲ್ಕು ಸಾವಿರ ಕಡಿತಗೊಳಿಸಿ ರೈತರಿಗೆ ದ್ರೋಹ ಮಾಡಿದ್ದಿರಿ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಳಸಾ ಬಂಡೂರಿ ಯೋಜನೆಗೆ ಕಾಂಗ್ರೆಸ್ ಒಂದು ಪೈಸೆ ಹಣವನ್ನೂ ನೀಡಿಲ್ಲ. ನಾನು ಸಿಎಂ ಆಗಿದ್ದಾಗ ಹಣ ನೀಡಿದ್ದೆ. ಅಧಿವೇಶನ ಮುಗಿದ ಬಳಿಕ ಹೋರಾಟ ಆರಂಭಿಸುತ್ತೇವೆ. ಈ ಸರ್ಕಾರ ಮನೆಗೆ ಹೋಗೋವರೆಗೂ ನಿರಂತರ ಹೋರಾಟ ಮುಂದುವರಿಯುತ್ತದೆ ಎಂದು ಗುಡುಗಿದರು.
ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ರಾಕ್ಷಸ ಗಣ ಇದೆ. ರಾಕ್ಷಸ ಗಣದ ನಾಯಕ ಡಿ ಕೆ ಶಿವಕುಮಾರ್, ಡಾ. ಪರಮೇಶ್ವರ್, ದೇಶದ್ರೋಹಿ ಜಮೀರ್ ಅಹ್ಮದ್, ಪ್ರಿಯಾಂಕ ಖರ್ಗೆ. ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಜಾತಿ ಜಾತಿಗೆ ಬೆಂಕಿ ಹಚ್ಚಿದ್ದಾರೆ. ವರ್ಗಾವಣೆ ದಂಧೆಯಲ್ಲಿ ಅಪ್ಪ ಮಗ ತೊಡಗಿದ್ದಾರೆ. ನವೆಂಬರ್ನಲ್ಲಿ ಜಾತಿ ಗಣತಿ ತರುವುದಾಗಿ ಹೇಳುವ ಮೂಲಕ ಸುಳ್ಳು ಹೇಳುತ್ತಿದ್ದಾರೆ. 456 ಜನ ರೈತರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರ ಪರಿಹಾರ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹರಿಹಾಯ್ದರು.
ಉತ್ತರಕರ್ನಾಟಕ ವಿರೋಧಿ ಸರ್ಕಾರ : ಗೋವಿಂದ ಕಾರಜೋಳ ಮಾತನಾಡಿ, ನಮ್ಮ ಸರ್ಕಾರದ ಅವಧಿಯಲ್ಲಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಆ ಯೋಜನೆಗಳನ್ನು ಬಂದ್ ಮಾಡಿ, ಉತ್ತರ ಕರ್ನಾಟಕದ ಜನರಿಗೆ ದ್ರೋಹ ಬಗೆದಿದ್ದಾರೆ. ಇದು ಉತ್ತರಕರ್ನಾಟಕ ವಿರೋಧಿ ಸರ್ಕಾರ ಎಂದು ವಾಗ್ದಾಳಿ ಮಾಡಿದರು.
ವಿಪಕ್ಷ ನಾಯಕ ಆರ್ ಅಶೋಕ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಕೊಡಲು ಇವರ ಬಳಿ ಹಣ ಇಲ್ಲ. ಅಲ್ಪಸಂಖ್ಯಾತರ ಕಾರ್ಯಕ್ರಮದಲ್ಲಿ ಹತ್ತು ಸಾವಿರ ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ಡಿಸಿ ಖಾತೆಯಲ್ಲಿ 700ಕೋಟಿ ಇದೆ ಎಂದು ಹೇಳುತ್ತಿದ್ದಾರೆ. ಮೇವು ಖರೀದಿಸಲು ಹಣ ಇಲ್ಲ ಎಂದು ಬರೆದಿದ್ದಾರೆ. ಪ್ರಧಾನಿ ರೈತ ಸಮ್ಮಾನ್ಗೆ ರಾಜ್ಯ ಸರ್ಕಾರದ ವಂತಿಕೆ ತೆಗೆದು ಹಾಕಿದ್ದಾರೆ. ರೈತರನ್ನು ಅಪಹಾಸ್ಯ ಮಾಡುವ ಹಾಗೂ ಭಿಕ್ಷೆ ಕೊಡುವ ರೀತಿಯಲ್ಲಿ ಹೆಕ್ಟೇರ್ಗೆ 2 ಸಾವಿರ ರೂ. ಬರ ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ಇಂಥ ಕೆಟ್ಟ ಸರ್ಕಾರ ತೊಲಗಬೇಕು ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವರಾದ ಬಿ. ಶ್ರೀರಾಮುಲು, ಶಶಿಕಲಾ ಜೊಲ್ಲೆ, ಸಿ. ಸಿ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ರಮೇಶ ಕತ್ತಿ, ಶಾಸಕರಾದ ಅರವಿಂದ ಬೆಲ್ಲದ, ನಿಖಿಲ್ ಕತ್ತಿ, ಬೈರತಿ ಬಸವರಾಜ, ಸುನೀಲ್ ಕುಮಾರ, ವಿಠ್ಠಲ ಹಲಗೇಕರ, ಆರಗ ಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ, ಕೋಟಾ ಶ್ರೀನಿವಾಸ ಪೂಜಾರಿ, ಹನುಮಂತ ನಿರಾಣಿ ಸೇರಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಿಜೆಪಿ ನಾಯಕರು ಯತ್ನಾಳ್ ಮಾಡಿರುವ ಆರೋಪಗಳಿಗೆ ಉತ್ತರಿಸಲಿ: ಸಿಎಂ ಸಿದ್ದರಾಮಯ್ಯ