ಬೆಳಗಾವಿ : ಕೇಂದ್ರ ಬಿಜೆಪಿ ಸರ್ಕಾರ ಚರ್ಚೆಯನ್ನು ಸಹ ಮಾಡದೆ ಕೊರೊನಾ ಸಂದರ್ಭದಲ್ಲಿ ಅನುಷ್ಠಾನ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಕುತಂತ್ರ ನೀತಿಯಿಂದ ಕೂಡಿದೆ ಎಂದು ವಿಧಾನಪರಿಷತ್ ಸದಸ್ಯ, ಎಐಸಿಸಿ ಮಾಜಿ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ಕಿಡಿಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಚರ್ಚೆ ನಡೆಸದೇ ಜುಲೈ 29ರಂದು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಏಕಾಏಕಿ ಇಡೀ ರಾಷ್ಟ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಆದ್ರೆ, ಭಾರತೀಯ ಜನತಾ ಪಾರ್ಟಿಯ ಆಡಳಿತ ಬೇರೆ ರಾಜ್ಯಗಳಲ್ಲಿ ಇದ್ದರೂ ಯಾವುದೇ ರಾಜ್ಯಗಳಲ್ಲಿ ಶಿಕ್ಷಣ ನೀತಿ ಅನುಷ್ಠಾನ ಮಾಡಿಲ್ಲ.
ಆದರೆ, ಇಡೀ ರಾಷ್ಟ್ರದಲ್ಲಿಯೇ ಶಿಕ್ಷಣಕ್ಕೆ ಮಾದರಿ ಆಗಿದ್ದ ಕರ್ನಾಟಕದಲ್ಲಿ ತರಾತುರಿಯಲ್ಲಿ ಜಾರಿಗೊಳಿಸುತ್ತಿರುವುದು ಕುತಂತ್ರದಿಂದ ಕೂಡಿದೆ ಅನಿಸುತ್ತಿದೆ. ಕಸ್ತೂರಿರಂಗನ್ ಅವರು ಹೆಸರಿಗಷ್ಟೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ.
ಉಳಿದವರೆಲ್ಲರೂ ಸಂಘ ಪರಿವಾರದವರಿದ್ದಾರೆ. ಸಂಘ ಪರಿವಾರದ ಗುಪ್ತ ಕಾರ್ಯಸೂಚಿ ಅನುಷ್ಠಾನಕ್ಕೆ ತರುವ ಷಡ್ಯಂತ್ರ ರಾಷ್ಟ್ರದಲ್ಲಿ ನಡೆಯುತ್ತಿದೆ. ಅದರ ವಿರುದ್ಧ ಧ್ವನಿ ಎತ್ತಬೇಕೆಂದು ಘಟಪ್ರಭಾದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಚರ್ಚೆ ಮಾಡಲಿದ್ದೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡುವ ಆಹಾರದ ಕಿಟ್‌ಗಳನ್ನು ಬಿಜೆಪಿಯವರು ಅಕ್ರಮವಾಗಿ ಏಕೆ ಇಟ್ಟುಕೊಂಡಿದ್ದರು ಎಂಬುವುದು ಯಕ್ಷಪ್ರಶ್ನೆಯಾಗಿದೆ. ಜನ ಸಾಮಾನ್ಯರ ಹಣದಿಂದ ಜನರಿಗೆ ಸೇರಬೇಕಿದ್ದ ಸರ್ಕಾರದ ಪುಡ್ ಕಿಟ್ ಅನ್ನು ಖರೀದಿಸಿ ಮನೆಯಲ್ಲಿ ಇಟ್ಟುಕೊಳ್ಳಲು ಬರೋದಿಲ್ಲ. ಇತ್ತ ಸಾಕಷ್ಟು ಕಿಟ್‌ಗಳ ಅವಧಿ ಮುಗಿದು ಹೋಗಿವೆ. ಅಕ್ಕಿಗೆ ಹುಳುಗಳು ಬಿದ್ದಿದ್ದು, ಸದ್ಯ ರಾಜಕೀಯ ಲಾಭಕ್ಕಾಗಿ ಕಿಟ್‌ಗಳನ್ನು ಹಂಚಿಕೆ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.
ಬಿಜೆಪಿ ಸರ್ಕಾರದ ಗೂಂಡಾಗಿರಿ ಹೊಸದೇನು ಅಲ್ಲ. ನಿರಂತರ ಗೂಂಡಾಗಿರಿ ನಡೆಯುತ್ತಲೇ ಇದೆ. ಇದೇ ಕಾರಣದಿಂದ ಕಾರವಾರದಲ್ಲಿ ಪೊಲೀಸ್ ಠಾಣೆಯಲ್ಲಿ ಪತ್ರಿಭಟನೆ ನಡೆಸಿದ್ದೇನೆ. ಇನ್ನು, ಮುಂದೆ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ ಮುಂದುವರೆದ್ರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಓದಿ: ಮೀನು ತ್ಯಾಜ್ಯ ಸಮುದ್ರಕ್ಕೆ ಸೇರಿಸುತ್ತಿರುವುದಾಗಿ ಸುಳ್ಳು ಆರೋಪ: ಅರ್ಜಿದಾರರಿಗೆ ₹10 ಲಕ್ಷ ದಂಡ ವಿಧಿಸಿದ ಹೈಕೋರ್ಟ್