ಬೆಳಗಾವಿ: ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಕಡಿವಾಣದ ಜೊತೆಗೆ ದೇಶದ ಆರ್ಥಿಕ ಸ್ಥಿತಿ ಚೇತರಿಕೆ ಆಗಲು ಸರ್ಕಾರ 4ನೇ ಹಂತದ ಲಾಕ್‌ಡೌನ್ ಮುಂದುವರಿಸಿದ್ದರೂ ಸಡಿಲಿಕೆಯನ್ನು ನೀಡಿದೆ. ಆದರೆ, ಜನರು ಕೊರೊನಾಗೆ ಹೆದರು ರಸ್ತೆಗಿಳಿಯದಿರುವ ಪರಿಣಾಮ ಆಟೋ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ಲಾಕ್‌ಡೌನ್ ಘೋಷಣೆಯಲ್ಲಿ ಅಗತ್ಯ ವಸ್ತುಗಳು, ತುರ್ತು ಸೇವೆಗಳಿಗೆ ಅವಕಾಶ ನೀಡಿ ಆಟೋ ಸೇರಿದಂತೆ ಇನ್ನಿತರ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿತ್ತು. ಇದರಿಂದ ದಿನದ ದುಡಿಮೆ ನಂಬಿ ಜೀವನ ಸಾಗಿಸುತ್ತಿದ್ದ ಆಟೋ ಚಾಲಕರು ಪರಿತಪಿಸುವಂತಾಯಿತು.
ಕಳೆದೆರಡು ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲಿ ಇದ್ದ ಅಟೋ ಚಾಲಕರಿಗೆ ಲಾಕ್‌ಡೌನ್ ಸಡಿಲಿಕೆ ಖುಷಿ ನೀಡಿತ್ತಾದರೂ ಪ್ರಯಾಣಿಕರ ಕೊರೆತೆಯಿಂದ ಒಂದೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮಹಾಮಾರಿಯ ರಣಕೇಕೆ ಮುಂದುವರೆಯುತ್ತಲೇ ಇದೆ. ಇದರಿಂದ ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ದಿನ ಬೆಳಗಾದರೆ ತುತ್ತಿನ ಚೀಲದ ಚಿಂತೆಯಲ್ಲಿರುವ ಅಟೋ ಚಾಲಕರು ಪ್ರಯಾಣಿಕರಿಲ್ಲದೆ ಕಂಗೆಟ್ಟಿದ್ದಾರೆ.