ಚಿಕ್ಕೋಡಿ:ಶಾಸಕ ಮಹೇಶ್ ಕುಮಠಳ್ಳಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಅಥಣಿಯಲ್ಲಿ ಲಕ್ಷ್ಮಣ್ ಸವದಿ ಕಣ್ಣೀರು ಹಾಕುವ ಮೂಲಕ ತಮ್ಮ ಭಾವುಕರಾದರು. ಲಕ್ಷ್ಮಣ್ ಸವದಿಗೆ ಪರೋಕ್ಷವಾಗಿ ಟಿಕೆಟ್ ಇಲ್ಲ ಎಂದು ದೆಹಲಿಯಲ್ಲಿ ಸಿಎಂ ಹೇಳಿಕೆ ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅಥಣಿಯಲ್ಲಿ ಲಕ್ಷ್ಮಣ್ ಸವದಿ ಕಣ್ಣೀರು ಹಾಕಿದ್ದಾರೆ.
ನನಗೆ ಸಿಎಂ ಟಿಕೆಟ್ ಇಲ್ಲ ಎಂದು ಹೇಳಿದ್ದಾರೆ. 2004ರಂದು ನಾನು ಬಿಜೆಪಿ ಪಕ್ಷ ಸೇರಿದ್ದೆ. ಸುಮಾರು ಇಪ್ಪತ್ತು ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿದ್ದೇನೆ. ಇವತ್ತು ಪಕ್ಷದ ವರಿಷ್ಠರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ಬಿಜೆಪಿ ಮನೆಯಿಂದ ನನ್ನನ್ನು ಹೊರಗೆ ನೂಕಬೇಡಿ. ನಾನು ನಿಷ್ಠಾವಂತ ಕಾರ್ಯಕರ್ತ, ನನಗೆ ಅನ್ಯಾಯ ಮಾಡಬೇಡಿ. ಯಡಿಯೂರಪ್ಪ, ಈಶ್ವರಪ್ಪ ಮುಂದಿನ ಟಿಕೆಟ್ ನಿನಗೆ ಎಂದಿದ್ದರು.
ಯಡಿಯೂರಪ್ಪನವರ ನನ್ನ ಕರೆದು ನಿನಗೆ ನಾನು ತಂದೆ ಸ್ಥಾನದಲ್ಲಿ ಇದ್ದೇನೆ ಎಂದು ಆಶೀರ್ವಾದ ಮಾಡಿದ್ದರು. ನೀವೂ ಹೇಳಿದ ಮಾತು ಈಡೇರಿಸಿಲ್ಲ. ಮಂಜುನಾಥನ ಸನ್ನಿಧಿಗೆ ಬನ್ನಿ ಎನ್ನುವ ಮೂಲಕ ಲಕ್ಷ್ಮಣ್ ಸವದಿ ಸವಾಲು ಹಾಕಿದರು.
ಕುಮಾರಸ್ವಾಮಿ ಅವರಿಗೆ ವಚನ ಭ್ರಷ್ಟ ಎಂದು ಹೇಳುತ್ತಿರಿ, ನೀವು ಏನು? ಬನ್ನಿ ಮಂಜುನಾಥ್ ಸನ್ನಿಧಿಗೆ, ನೀವು ನನಗೆ ಮಾತು ನೀಡಲ್ಲ ಎಂದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ನನಗೆ ಟಿಕೆಟ್ ಇಲ್ಲ ಎಂದು ನನ್ನ ಗೆಳೆಯ ಸಿಎಂ ಬಸವರಾಜ್ ಹೇಳಿದ್ದಾರೆ. ಭಲೇ ಬಸವರಾಜ್ ಒಳ್ಳೆಯ ಮಾತು ಹೇಳಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರು ಮಾತು ಕೇಳಿ ನಾನು ಎಂಎಲ್ಸಿ ಆದೆ. ಆ ಚುನಾವಣೆಯನ್ನು ನನ್ನ ಹೆಸರು ಮೇಲೆ ಆರು ಜನ ಗುಂಡ್ಲೆ ಚಿಹ್ನೆ ಹಾಕಿದರು. ಅವರು ಯಾರು ಎಂದು ಹೇಳುವುದಿಲ್ಲ. ಇದೇ 13 ರಂದು ನಿಮ್ಮ ಅಭಿಪ್ರಾಯ ಅಂತಿಮ ಎನ್ನುತ್ತಾ ಭಾಷಣ ಮಾಡುವ ಸಮಯದಲ್ಲಿ ಮಾಜಿ ಸಚಿವ ಸವದಿ ಕಣ್ಣೀರು ಹಾಕಿದರು. ಇದೇ ವೇಳೆ ನನಗೆ ಬೆಂಬಲ ನೀಡುವಂತೆ ಸವದಿ ಕೈಮುಗಿದು ಜನರಲ್ಲಿ ಮನವಿ ಮಾಡಿದರು. ನೀವು ಮನೆಯಲ್ಲಿ ಇರುವಂತೆ ಹೇಳಿದ್ರೆ, ನಾನು ಮನೆಯಲ್ಲಿ ಇರುತ್ತೇನೆ. ಒಂದು ವೇಳೆ ಚುನಾವಣೆಗೆ ಬನ್ನಿ ಅಂದರೆ ನಾನು ಚುನಾವಣೆ ಬರುತ್ತೇನೆ. ನಾನು ರಾಜಕೀಯ ಸಂಕಷ್ಟದಲ್ಲಿ ಇದ್ದೇನೆ. ನನ್ನ ಕೈ ಬಿಡಬೇಡಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಲಕ್ಷ್ಮಣ್ ಸವದಿ ಗಳಗಳನೆ ಅತ್ತು ಕಣ್ಣೀರು ಹಾಕಿದರೂ ಪಕ್ಷದ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ. ನರೇಂದ್ರ ಮೋದಿ ಅತ್ಯುತ್ತಮ ನಾಯಕ ಆದರೆ, ಲಕ್ಷ್ಮಣ್ ಸವದಿ ಕೆಲಸಕ್ಕೆ ಬಾರದ ವ್ಯಕ್ತಿ ಎಂದು ತಿಳಿಸಿದ್ದಾರೆ. ಅವರ ಭಾವನೆಗಳಿಗೆ ನಾನು ತಲೆ ಬಾಗುತ್ತೇನೆ. ಬಿಜೆಪಿ ವರಿಷ್ಠರಿಗೆ ನಾನು ಕಿವಿ ಮಾತು ಹೇಳುತ್ತೇನೆ. ಕೊನೆ ಬಾರಿಗೆ ಇನ್ನೊಂದು ಸಾರಿ ಪರಿಶೀಲನೆ ಮಾಡಿ ಮನೆಯಿಂದ ನನ್ನ ಹೊರಗಡೆ ಹಾಕಬೇಡಿ. ರಾಜಕೀಯ ಗುರುಗಳಾದ ಅನಂತಕುಮಾರ್ ಹೆಗಡೆ ಇಲ್ಲ. ಮಾಧ್ಯಮ ಮುಖಾಂತರ ನನ್ನ ರಾಜಕೀಯ ಗುರುಗಳಿಗೆ ಕ್ಷಮೆ ಕೇಳುತ್ತೇನೆ. ನನ್ನ ಮನದಲ್ಲಿ ಹಾಗೂ ಹೆಸರು ಹೇಳದ ರಾಜಕೀಯ ಗುರುವಿಗೆ ಕೊನೆಯದಾಗಿ ನನ್ನ ಕ್ಷಮೆ ಎಂದು ಸವದಿ ಅಳುತ್ತಾ ಭಾಷಣ ಮುಗಿಸಿದರು.
ಇದನ್ನೂಓದಿ: ಅಮೂಲ್ನಲ್ಲಿ ನಂದಿನಿ ವಿಲೀನ ಆಗುವುದಕ್ಕೆ ನಾವು ಬಿಡಲ್ಲ: ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ