ಅಥಣಿ: ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ ಮುಂದೆ ವಯೋವೃದ್ಧ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆ ಉಂಟಾಗುತ್ತಿದ್ದಂತೆ ತಕ್ಷಣವೇ ಅಥಣಿ ತಹಶೀಲ್ದಾರ್ ತಮ್ಮ ಸರ್ಕಾರಿ ವಾಹನದಲ್ಲಿ ರೋಗಿಯನ್ನು ಸಮುದಾಯ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ಅಥಣಿ ಹೊರವಲಯದಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದ್ದು, ಚಿಕಿತ್ಸೆಗೆ ಗ್ರಾಮಸ್ಥರೊಬ್ಬರು ಬಂದಾಗ ಅವರಿಗೆ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ವೈದ್ಯಾಧಿಕಾರಿ ಬಸನಗೌಡ ಕಾಗೆ ಆರೋಗ್ಯ ತಪಾಸಣೆ ಮಾಡಿ ಇವರನ್ನು ತಾಲೂಕು ಸಮುದಾಯದ ಆಸ್ಪತ್ರೆ ದಾಖಲು ಮಾಡುವಂತೆ ಸೂಚಿಸಿದ್ದಾರೆ. ಆದರೆ ಸ್ಥಳದಲ್ಲಿ ಆಂಬ್ಯುಲೆನ್ಸ್ ಇರಲಿಲ್ಲ.
ಇದನ್ನು ಗಮನಿಸಿದ ತಹಶೀಲ್ದಾರ್ ದುಂಡಪ್ಪ ಕೋಮಾರ ತಮ್ಮ ಸರ್ಕಾರಿ ವಾಹನದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಹಶೀಲ್ದಾರ್ ದುಂಡಪ್ಪ ಕೋಮಾರ ಕಾರ್ಯಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.