ಅಥಣಿ: ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಿಂದ ಜೆಡಿಎಸ್ ಅಭ್ಯರ್ಥಿ ಗುರು ದಾಶ್ಯಾಳ ಹಿಂದೆ ಸರಿದಿದ್ದು, ಇಂದು ನಾಮಪತ್ರ ಹಿಂಪಡೆದಿದ್ದಾರೆ.
ಗುರು ದಾಶ್ಯಾಳ ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ಹೀಗಾಗಿ ಡಿಸಿಎಂ ಲಕ್ಷ್ಮಣ್ ಸವದಿ ಗುರು ದಾಶ್ಯಾಳ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಲಕ್ಷ್ಮಣ್ ಸವದಿ ಸಂಧಾನಕ್ಕೆ ಗುರು ಮಣಿದಿದ್ದಾರೆ. ಡಿಸಿಎಂ ಸವದಿ ಅವರ ಒತ್ತಾಯದ ಮೇರೆಗೆ ನಾಮಪತ್ರ ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಜೊತೆ ಆಗಮಿಸಿದ್ದ ಜೆಡಿಎಸ್ ಅಭ್ಯರ್ಥಿ ಗುರು ದಾಶ್ಯಾಳ ನಾಮಪತ್ರ ವಾಪಸ್ ಪಡೆದಿದ್ದಾರೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ಭಾರಿ ಆಘಾತವಾಗಿದ್ದು, ಗುರು ದಾಶ್ಯಾಳ ನಡೆಗೆ ತೆನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಮನವೊಲಿಸುವಲ್ಲಿ ಎಂ.ಬಿ. ಪಾಟೀಲ್ ಸಫಲರಾಗಿದ್ದಾರೆ. ಇಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿವಾದ್ದರಿಂದ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಬಂಡಾಯ ಅಭ್ಯರ್ಥಿ ಚುನಾವಣಾ ಕಚೇರಿಗೆ ಆಗಮಿಸಿದ್ದಾರೆ.
ಸದಾಶಿವ ಬುಟಾಳೆ, ಸುರೇಶ್ ಪಾಟೀಲ್, ಶಹಜಾನ್ ಡೊಂಗರಗಾಂವ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿದ್ದು, ಅವರು ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿಯ ದಾರಿಯೂ ಸುಗಮವಾಗಿದೆ.