ಅಥಣಿ : ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಕೃಷ್ಣಾ ನದಿ ಭೋರ್ಗರೆದು ಧುಮ್ಮಿಕ್ಕಿ ಅಥಣಿ ಭಾಗದ ರೈತರ ಜೀವನವೇ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ. ಆದರೆ, ತಾಲೂಕು ಆಡಳಿತ ಮತ್ತೆ ನೆರೆ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆಯುವ ಪ್ರಯತ್ನವನ್ನು ಮಾಡಿದೆ.
ಅಥಣಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಸರ್ಕಾರ ಸರ್ವೆ ಮಾಡಿ, ವರ್ಗ A-ಸಂಪೂರ್ಣ ಹಾನಿಗೊಳಗಾದ ಮನೆ, B - ಭಾಗಶಃ ಹಾನಿಗೊಳಗಾದ ಮನೆ, C - ಅಲ್ಪಸ್ವಲ್ಪ ಹಾನಿಗೊಳಗಾದ ಮನೆ. ಹೀಗೆ ಅಧಿಕಾರಿಗಳು ABC ಎಂಬ ವರ್ಗ ಮಾಡಿ ವಸ್ತು ಸ್ಥಿತಿ ನೋಡಿ ವರದಿ ತಯಾರಿಸಿ ತಾಲೂಕು ಆಡಳಿತಕ್ಕೆ ತಲುಪಿಸಿದ್ದರು. ಆದರೆ, ತಾಲೂಕು ಆಡಳಿತದ ಕೈಸೇರಿದ ವರದಿ ಸಂಪೂರ್ಣ ಬದಲಾಗಿದ್ದು ನೆರೆ ಸಂತ್ರಸ್ತರ ಗಾಯದ ಮೇಲೆ ಉಪ್ಪು ಸುರಿದ್ದಾರೆ.
ಇನ್ನು, ಈ ಕುರಿತು ನೆರ ಸಂತ್ರಸ್ತರು ತಮ್ಮ ಕಷ್ಟಗಳನ್ನು ತಾಲೂಕು ದಂಡಾಧಿಕಾರಿ ಬಳೆಗೆರ ಮುಂದೆ ಹೇಳಿದರೆ, ನನ್ನ ಲಾಗಿನ್ ಹ್ಯಾಕ್ ಆಗಿದೆ. ಸಿಸ್ಟಮ್ ಹಾಳಾಗಿದೆ. ಯಾರೋ ರೈತರು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳುತ್ತೇನೆ ಎಂದು ಆಕ್ರೋಶದ ಮಾತುಗಳನ್ನಾಡುತ್ತಾರೆ.
ಇದು ತಾಲೂಕು ಆಡಳಿತದ ವೈಫಲ್ಯ. ಅದನ್ನು ಬಿಟ್ಟು ರೈತರನ್ನು ಜೈಲಿಗೆ ತಳ್ಳುತ್ತೇನೆ ಎಂದು ಮಾತನಾಡುವುದು ಎಷ್ಟು ಸರಿ ಸಾಯಬ್ರೇ ಎಂದು ಸಭೆಯಲ್ಲಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಎದುರು ರೈತ ಸಂಘ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.