ಅಥಣಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ತಾಲೂಕಿನ ಕೃಷ್ಣಾನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ್ ವಸತಿ ಪ್ರದೇಶ ನಡುಗಡ್ಡೆಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ತಾಲೂಕು ಆಡಳಿತ ಸ್ಥಳಾಂತರ ಮಾಡಿದೆ. ಇನ್ನೂ ಕೆಲವರು ಅಲ್ಲೇ ಇರುವ ಕಾರಣ, ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರ ಮನವೊಲಿಸಿ ಕರೆ ತರುವ ಪ್ರಯತ್ನ ಮಾಡುತ್ತಿದ್ದಾರೆ.
ಓದಿ : ಪ್ರವಾಹಕ್ಕೆ ಕೊಚ್ಚಿ ಹೋದ ಗುಳ್ಳಾಪುರ - ಹಳವಳ್ಳಿ ಸೇತುವೆ: ಸಂಪರ್ಕ ಕಡಿತ!
ಹುಲಗಬಾಳ ಮಾಂಗ್ ವಸತಿ ಪ್ರದೇಶದಲ್ಲಿ ಸುಮಾರು 52 ಕುಟುಂಬಗಳ 220 ಜನರು ವಾಸವಾಗಿದ್ದಾರೆ. ಇವರೊಂದಿಗೆ 84 ಜಾನುವಾರುಗಳು ಇವೆ. ಎಲ್ಲಾ ಜನರು ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ.
ಹುಲಗಬಾಳ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ತಾಲೂಕಿನ ನದಿ ಪಾತ್ರದ 1000 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಜಲಾವೃತಗೊಂಡಿವೆ.