ಗೋಕಾಕ: ಉಪಚುನಾವಣೆ ಡಿಸೆಂಬರ್ ತಿಂಗಳಲ್ಲಿ ನಡೆಯುವುದು ನಿಶ್ಚಯವಾಗಿದ್ದು. ರಾಜಕೀಯ ಪಕ್ಷಗಳು ಈಗಿನಿಂದಲೇ ತಯಾರಿ ಆರಂಭಿಸಿವೆ. ಕಾಂಗ್ರೆಸ್-ಬಿಜೆಪಿಯಿಂದ ಜಾರಕಿಹೊಳಿ ಸಹೋದರರ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಹೀಗಾಗಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಗೋಕಾಕಿನ ಬಿಜೆಪಿ ಮುಖಂಡ ಅಶೋಕ ಪೂಜಾರಿಗೆ ಆಫರ್ ನೀಡಿದ್ದಾರೆ.
ಅಶೋಕ ಪೂಜಾರಿಗೆ ಕರೆ ಮಾಡಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಗೋಕಾಕ್ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಗುವಂತೆ ಹೇಳಿದ್ದಾರೆ. ಆದರೆ, ಅಶೋಕ ಪೂಜಾರಿ ಮಾತ್ರ ನಾನು ಕಾರ್ಯಕರ್ತರ ಅಭಿಪ್ರಾಯ ಪಡೆದು ತಮಗೆ ತಿಳಿಸುತ್ತೇನೆ ಎಂದಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಜತೆಗೆ ಮಾತನಾಡಿದ ಅಶೋಕ ಪೂಜಾರಿ, ದೇವೇಗೌಡರು ಆಫರ್ ನೀಡಿದ್ದು ನಿಜ. ಆದರೆ, ನಾನು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.
ಅಶೋಶ ಪೂಜಾರಿ ಮೇಲೆ ಗೌಡರ ಪ್ರೀತಿಯಾಕೆ?: ಗೋಕಾಕ್ ಕ್ಷೇತ್ರದಲ್ಲಿ 2008, 2013ರಲ್ಲಿ ಅನರ್ಹ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಶೋಕ ಪೂಜಾರಿ ಪ್ರಬಲ ಸ್ಪರ್ಧೆ ನೀಡಿದ್ರು. ನಂತರ ಜೆಡಿಎಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ತೀವ್ರ ಸ್ಪರ್ಧೆ ನೀಡಿದ್ರು. ಪೂಜಾರಿ ಪರ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ವತಃ ರೋಡ್ ಶೋ ಮಾಡಿದ್ರು. ಸದ್ಯ ಬಿಜೆಪಿಯಲ್ಲಿ ಇದ್ರೂ ಟಿಕೆಟ್ ಸಿಗುವ ಬಗ್ಗೆ ಅಶೋಕ ಪೂಜಾರಿಗೆ ಯಾವುದೇ ಖಾತರಿ ಇಲ್ಲ. ಇನ್ನು, ಕಳೆದ ಎರಡು ದಶಕದಿಂದ ಜಾರಕಿಹೊಳಿ ಸಹೋದರರ ವಿರುದ್ಧ ರಾಜಕೀಯ ಹೋರಾಟ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ದೇವೇಗೌಡರು ತಮ್ಮ ಹಳೆಯ ಶಿಷ್ಯನಿಗೆ ಮತ್ತೊಮ್ಮೆ ಆಫರ್ ಕೊಟ್ಟಿದ್ದಾರೆ.
ಈ ಮೂಲಕ ದೇವೇಗೌಡರು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕ ರಮೇಶ ಜಾರಕಿಹೊಳಿಗೆ ಉಪಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ ಹುಡುಕಾಟ ನಡೆಸುತ್ತಿದ್ದಾರೆ.