ಬೆಳಗಾವಿ: ತಮ್ಮ ಮನೆ ಮುಳುಗಡೆಯಾಗಿದ್ದರೂ ನೆರೆ ಸಂತ್ರಸ್ತರ ಸೇವೆಗೆ ಧಾವಿಸಿದ ಆಶಾ ಕಾರ್ಯಕರ್ತೆಯರು ಇಂದು ತಮ್ಮ ಸಮಸ್ಯೆ,ನೋವುಗಳನ್ನು ಹೇಳುತ್ತಲೇ ಕಣ್ಣೀರಿಟ್ಟಿದ್ದಾರೆ.
ಕೊರೊನಾ ವಿರುದ್ಧ ಹೋರಾಡಿದ್ದ ಈ ಆಶಾ ಕಾರ್ಯಕರ್ತೆಯರು ಈಗ ನೆರೆ ಸಂತ್ರಸ್ತರಿಗೆ ಆಸರೆಯಾಗಿದ್ದಾರೆ. ಗೋಕಾಕ ತಾಲೂಕಿನ ಮೆಳವಂಕಿಯ ಕನ್ನಡ ಶಾಲೆಯಲ್ಲಿ ನೆರೆ ಸಂತ್ರಸ್ತರಿಗೆ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಜನರ ಸಮಸ್ಯೆಗಳನ್ನು ಹೇಳುತ್ತಲೇ ಕಣ್ಣೀರು ಹಾಕಿದ್ದಾರೆ. ಆದ್ರೆ, ತಮ್ಮ ಮನೆಗಳು ನೀರಿನಲ್ಲಿ ಜಲಾವೃತವಾಗಿದ್ದರೂ ಕರ್ತವ್ಯ ಪ್ರಜ್ಞೆ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ವೇಳೆ ಮಾತನಾಡಿದ ಆಶಾ ಕಾರ್ಯಕರ್ತೆಯೊಬ್ಬರು, ಕಳೆದ ಬಾರಿ ಭೀಕರ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡಿದ್ದೇವೆ. ಈ ಬಾರಿಯೂ ಮತ್ತೆ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ನಮ್ಮ ಕುಟುಂಬವೂ ಸೇರಿ 289ಕ್ಕೂ ಹೆಚ್ಚು ಜನರು ಇಲ್ಲೇ ವಾಸವಿದ್ದೇವೆ. ಕಳೆದ ಬಾರಿ ಪ್ರವಾಹದಲ್ಲಿ ಮೆಳವಂಕಿಯಲ್ಲಿ 300 ಮನೆಗಳು ಬಿದ್ದಿವೆ. ಅದರಲ್ಲಿ ಕೇವಲ ನೂರು ಜನರಿಗೆ ಮಾತ್ರ ಪರಿಹಾರ ಬಂದಿದೆ. ನಮಗೂ ಸಹ 15 ತಿಂಗಳ ವೇತನ ಬಂದಿಲ್ಲ. ಈ ತಿಂಗಳು 2 ಸಾವಿರ ವೇತನ ಬಂದಿದೆ ಕೇವರ 2 ಸಾವಿರ ಹಣದಲ್ಲಿ ಕುಟುಂಬದ 7 ಸದಸ್ಯರನ್ನು ಸಾಕಬೇಕು, ತುಂಬಾ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.