ಬೆಳಗಾವಿ: ಬಿಜೆಪಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಅತೃಪ್ತ ಶಾಸಕರ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರ ಬಗ್ಗೆ ಮಾತನಾಡಲು ಹಿಂದೇಟು ಹಾಕಿರುವುದು ಅಚ್ಚರಿ ಮೂಡಿಸಿದೆ. ಅಸಮಾಧಾನಿತ ಶಾಸಕರ ಬಗ್ಗೆ ಹಾಗೂ ಸಿಎಂ ವಿರುದ್ಧ ಬ್ಲ್ಯಾಕ್ಮೇಲ್ ರಾಜಕಾರಣ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಇಂದು ಜನಸೇವಕ ಸಮಾವೇಶ ನಡೆಯಲಿದ್ದು, ಆ ವಿಚಾರಗಳ ಬಗ್ಗೆ ಈಗ ಏಕೆ ಮಾತನಾಡುವುದು ಎಂದು ಪ್ರಶ್ನಿಸಿದರು.
ಬಹಳ ದಿನಗಳ ಬಳಿಕ ದೊಡ್ಡಮಟ್ಟದ ಸಮಾವೇಶ ನಡೆಯುತ್ತಿದೆ. ಕೇಂದ್ರ ಗೃಹಸಚಿವರಾದ ಬಳಿಕ ಮೊದಲ ಬಾರಿ ಅಮಿತ್ ಶಾ ಈ ಭಾಗಕ್ಕೆ ಬರುತ್ತಿದ್ದಾರೆ. ನಾವೆಲ್ಲ ಅಮಿತ್ ಶಾ ರನ್ನು ಸ್ವಾಗತಿಸುತ್ತೇವೆ. ದೊಡ್ಡ ಮಟ್ಟದ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ಬೆಳಗಾವಿ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆ ಇಂದು ಚರ್ಚೆ ಆಗಲ್ಲ. ಉಪಚುನಾವಣೆಯಲ್ಲಿ ನಾವು ಗೆಲ್ಲಲಿದ್ದೇವೆ ಎಂದು ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.