ಬೆಳಗಾವಿ: ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಕನ್ನಡ ಪಾರಿಭಾಷಿಕ ಶಬ್ದಗಳು ಬಹಳ ಕಡಿಮೆ ಇರುವ ಹಿನ್ನೆಲೆ ಅವುಗಳನ್ನು ಹೆಚ್ಚು ಪ್ರಚಲಿತಗೊಳಿಸುವ ಉದ್ದೇಶದಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಸಿ.ಎಂ.ಜೋಷಿ ಹೇಳಿದರು.
ನ್ಯಾಯಾಧೀಶರು ತೀರ್ಪು ಬರೆಯುವಾಗ ಕನ್ನಡ ಭಾಷೆಯನ್ನು ಬಳಸುವಂತೆ ಜಾಗೃತಿ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಹೆಚ್ಚಾಗಿ ಆಂಗ್ಲ ಭಾಷೆಯ ಶಬ್ದಗಳನ್ನ ಬಳಸಲಾಗುತ್ತಿದೆ. ಇನ್ನು ರಾಜ್ಯ ಸರ್ಕಾರ 2020 ನವಂಬರ್ 1ರಿಂದ 2021 ಅಕ್ಟೋಬರ್ 31ರವರೆಗೆ ಕನ್ನಡ ಕಾಯಕ ವರ್ಷ ಎಂದು ಘೋಷಣೆ ಮಾಡಿದೆ. ಹೀಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಜಾಗೃತಿ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಕನ್ನಡ ಪಾರಿಭಾಷಿಕ ಶಬ್ದಗಳು ಬಹಳ ಕಡಿಮೆ ಇರುವ ಹಿನ್ನೆಲೆ ಅವುಗಳನ್ನು ಹೆಚ್ಚು ಪ್ರಚಲಿತಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ. ಅನಿವಾರ್ಯ ಪದಗಳು ಇದ್ದಲ್ಲಿ ಅಂತಹ ಪದಗಳನ್ನು ಕನ್ನಡದಲ್ಲಿಯೇ ಯಥಾವತ್ತಾಗಿ ಉಳಿಸಿಕೊಂಡು ವಕೀಲರು ಕನ್ನಡದಲ್ಲಿಯೇ ವಕಾಲತ್ತು ಮಾಡಬೇಕು. ಅದೇ ರೀತಿ ನ್ಯಾಯಾಧೀಶರು ನಿರ್ಣಯ ಬರೆಯುವ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಆರ್.ಸಿ.ಪಾಟೀಲ್, ಕಾರ್ಯದರ್ಶಿ ಶಿವಪುತ್ರಪ್ಪ ಪಟಕಲ್, ಸದಸ್ಯರಾದ ಗಜಾನಂದ ಪಾಟೀಲ್, ಎನ್.ರಮೇಶ, ಸಿ.ಕೋಟಿಯಾನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ. ಅರವಿಂದ ಕುಲಕರ್ಣಿ ಇದ್ದರು.