ಬೆಳಗಾವಿ : ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಮೂರು ಉಪಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಚಿವ ಅರವಿಂದ್ ಲಿಂಬಾವಳಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ ಪರವಾಗಿ ಸಿಎಂ ಸೇರಿ ಅನೇಕರಿಂದ ಪ್ರಚಾರ ನಡೆಸಲಾಗುತ್ತಿದೆ. ನಾಳೆ, ನಾಡಿದ್ದು ನಾನೂ ಕೂಡ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದರು.
ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಲಿಂಬಾವಳಿ, ಕಾಂಗ್ರೆಸ್ಗೆ ಚುನಾವಣೆ ಎದುರಿಸಲು ಬೇರೆ ವಿಷಯವೇ ಇಲ್ಲ. ಹಾಗಾಗಿ, ಏನೇನೋ ಮಾತನಾಡ್ತಿದ್ದಾರೆ. ಸರ್ಕಾರ ಯಾಕೆ ಪತನವಾಗ್ಬೇಕು? ಮೂರು ಕ್ಷೇತ್ರಗಳಲ್ಲಿ ಸೋತ ಬಳಿಕ ಸರ್ಕಾರದ ಪತನಕ್ಕೆ ಅವರೇನಾದರೂ ಪ್ರಯತ್ನ ಮಾಡ್ತಿದ್ದಾರಾ..
ಸರ್ಕಾರ ಪತನ ಮಾಡಲು ರಂದೀಪ್ ಸಿಂಗ್ ಸುರ್ಜೇವಾಲ ವ್ಯೂಹ ಏನಾದರೂ ರಚನೆ ಮಾಡ್ತಿದ್ದಾರಾ ಎಂಬ ಸಂಶಯ ನನಗೆ ಬರ್ತಿದೆ. ಯಾವುದೇ ವ್ಯೂಹ ರಚಿಸಿದರೂ ನಮ್ಮ ಸರ್ಕಾರ ಸುರಕ್ಷಿತವಾಗಿರುತ್ತದೆ. ಸುರ್ಜೇವಾಲಗೆ ನಿಶ್ಚಿತವಾಗಿ ನಿರಾಶೆಯಾಗಲಿದೆ ಎಂದು ಹೇಳಿದರು.
ಓದಿ : ಬೆಳಗಾವಿ ಉಪಚುನಾವಣೆಯಲ್ಲಿ ಮಂಗಳಾ ಅಂಗಡಿ ಗೆಲುವು ನಿಶ್ಚಿತ: ಸಚಿವ ಶ್ರೀಮಂತ ಪಾಟೀಲ
ವಿಜಯೇಂದ್ರ ಟ್ಯಾಕ್ಸ್ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆರೋಪಗಳು ಇದ್ದೇ ಇರುತ್ತವೆ. ಕಾಂಗ್ರೆಸ್ನವರು ಆರೋಪ ಮಾಡಲೇಬೇಕಲ್ವಾ? ಈ ರೀತಿ ಆರೋಪಗಳನ್ನು ಹುಟ್ಟು ಹಾಕುವ ಕೆಲಸವನ್ನು ಅವರು ಮಾಡ್ತಿದಾರೆ ಎಂದರು.