ಬೆಳಗಾವಿ : ಕರ್ನಾಟಕ ನಗರಪಾಲಿಕೆಗಳ ಹಾಗೂ ಕೆಲವು ಇತರೆ ಕಾನೂನು ತಿದ್ದುಪಡಿ ವಿಧೇಯಕ ವಿಧಾನ ಪರಿಷತ್‌ನಲ್ಲಿ ಅನುಮೋದನೆ ಪಡೆಯಿತು. ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ವಿಧೇಯಕವನ್ನು ಪರಿಷತ್‌ನಲ್ಲಿ ಮಂಡಿಸಿದರು. ವಿಧೇಯಕದ ಮೇಲೆ ಆಡಳಿತ ಪ್ರತಿಪಕ್ಷದ ಸದಸ್ಯರು ಚರ್ಚೆ ನಡೆಸಿದರು.
ಕಾಂಗ್ರೆಸ್ ಸದಸ್ಯ ಪಿಆರ್ ರಮೇಶ್ ಮಾತನಾಡಿ, ಈ ವಿಧೇಯಕ ಸಾರ್ವಜನಿಕರ ಸ್ನೇಹಿ ಅಲ್ಲ. ಸಮರ್ಪಕ ವಿವರಣೆ ಇಲ್ಲ. ಕಟ್ಟಡದ ಮೇಲೆ ಇದೇ ರೀತಿ ತೆರಿಗೆ ವಿಧಿಸುತ್ತೇವೆ. ಆದರೆ, ಅಧಿಕೃತ ಕಟ್ಟಡಗಳ ನಿರ್ಮಾಣ ಆಗುವುದಿಲ್ಲ. ಅನಧಿಕೃತ ಕಟ್ಟಡಗಳ ಸಂಖ್ಯೆ ಹೆಚ್ಚಾಗಲಿದೆ.
ಅನಗತ್ಯವಾಗಿ ತೆರಿಗೆ ಭಾರ ಹೇರುತ್ತಿರುವುದು, ಕಟ್ಟಡ ನಿರ್ಮಾಣಕ್ಕೆ ಅಂತಾ ಹೆಚ್ಚಿನ ಮೊತ್ತವನ್ನು ಶುಲ್ಕ ಹಾಗೂ ಇತರೆ ತೆರಿಗೆಗಳಿಗೆ ಜನ ಹಣ ಬಳಸಬೇಕಾಗಿ ಬರಲಿದೆ. ಕೆಎಂಸಿ ಕಾಯ್ದೆಯಡಿ ವ್ಯವಸ್ಥೆ ಇರುವಾಗ ಬಿಬಿಎಂಪಿ ಕಾಯ್ದೆ ಅಡಿ ಹೊಸ ಬಿಲ್ ಅನ್ನು ತಂದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಬಿಬಿಎಂಪಿ ಕಾಯ್ದೆ ಇರುವಾಗ ಇಂಥದ್ದೊಂದು ಹೊಸ ತಿದ್ದುಪಡಿ ಕಾಯ್ದೆಯ ಅಗತ್ಯ ಇಲ್ಲ. ದಯವಿಟ್ಟು ಈ ಕಾಯ್ದೆಯನ್ನು ಹಿಂಪಡೆಯಿರಿ. ಇಲ್ಲವಾದರೆ ಇದನ್ನ ಮರುಪರಿಶೀಲಿಸಿ ಎಂದು ಸಲಹೆ ನೀಡಿದರು.
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಕಾಯ್ದೆಯಲ್ಲಿ ತಿದ್ದುಪಡಿ ತರಲು ಹೈಕೋರ್ಟ್ ಒಂದು ಅವಕಾಶವನ್ನು ಮಾಡಿಕೊಟ್ಟಿದೆ. ನ್ಯಾಯಾಲಯ ನೀಡಿದ ಆದೇಶದ ಅನುಸಾರ ಬಿಬಿಎಂಪಿ ಹಾಗೂ ನಗರಪಾಲಿಕೆ ಕಾಯ್ದೆಗಳಲ್ಲಿ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದರು.
ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಮಾತನಾಡಿ, ಕಾನೂನು ಇಲ್ಲದೆ ನೀವು ತೆರಿಗೆ ಸಂಗ್ರಹ ಮಾಡಿದ್ದೀರಿ ಎಂದು ಹೈಕೋರ್ಟ್ ಹೇಳಿದೆ. ಇದೊಂದು ವಿಧೇಯಕ ಜಾರಿಗೆ ತರುವಲ್ಲಿ ಹೆಚ್ಚು ಚರ್ಚೆಯಾಗುವ ಅಗತ್ಯವಿದೆ ಎಂದರು.
ಆಡಳಿತ ಪಕ್ಷದ ಸದಸ್ಯರು ವಿಧೇಯಕದ ಪರವಾಗಿ ಮಾತನಾಡಿದರೆ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಇದೇ ವಿಚಾರವಾಗಿ ಮಿಶ್ರ ಪ್ರತಿಕ್ರಿಯೆ ನೀಡಿದರು. ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ಸುದೀರ್ಘ ಚರ್ಚೆಯ ಬಳಿಕ ವಿಧೇಯಕ ಅನುಮೋದನೆ ಪಡೆಯಿತು.