ಅಥಣಿ: ಹಲವಾರು ವರ್ಷಗಳಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸೇವೆಸಲ್ಲಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ವೇತನ ಹೆಚ್ಚಳ ಮತ್ತು ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಅಥಣಿ ಪಾಲಿಟೆಕ್ನಿಕ್ ಉಪನ್ಯಾಸಕರು ಮನವಿ ಸಲ್ಲಿಸಿದರು.
ಅಥಣಿ ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಮನವಿ ಸಲ್ಲಿಸಿದ ಬಳಿಕ ಉಪನ್ಯಾಸಕ ಆರ್.ಎ.ಬಡಿಗೇರ ಮಾತನಾಡಿ, ನಾವು ಹಲವು ವರ್ಷಗಳಿಂದ ಉಪನ್ಯಾಸ ಮಾಡುತ್ತಿದ್ದೇವೆ. ನಮಗೆ ಮಾಸಿಕವಾಗಿ 7,500 ಸಾವಿರ ವೇತನ ನಿಗದಿಪಡಿಸಿ, ವಾರ್ಷಿಕವಾಗಿ ಒಮ್ಮೆ ಅಥವಾ ಎರಡು ಬಾರಿ ನೀಡುತ್ತಿದ್ದಾರೆ. ಅದೂ ಕೂಡ 8 ತಿಂಗಳಿಗೆ ಮಾತ್ರ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಯಲ್ಲಿ ನಾವು ಸಂಪೂರ್ಣ ಶ್ರಮ ವಹಿಸುತ್ತೇವೆ. ಆದರೆ, ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ ಎಂದು ದೂರಿದರು .

ಪ್ರೌಢಶಾಲೆ ಅತಿಥಿ ಉಪನ್ಯಾಸಕರು ಮಾಸಿಕವಾಗಿ 8 ಸಾವಿರ ವೇತನ ಪಡೆಯುತ್ತಿದ್ದಾರೆ, ಪದವಿ ಪೂರ್ವ ಅತಿಥಿ ಉಪನ್ಯಾಸಕರು 12 ಸಾವಿರ ರೂ. ಗಳನ್ನು 10 ತಿಂಗಳಿಗೆ ಪಡೆಯುತ್ತಿದ್ದಾರೆ. ಹೀಗೆ ನಮಗಿಂತ ಕೆಳಗಿನ ಹಂತದ ಉಪನ್ಯಾಸಕರೆಲ್ಲಾ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಆದರೆ ನಮಗೆ ಮಾತ್ರ ಕಡಿಮೆ ವೇತನ ನೀಡಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.