ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ದಿನಕ್ಕೆ 15 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರ ಹೇಳಿದರು.
ಪ್ರಸತ್ತ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದು ಸೋಮವಾರ (ಡಿಸೆಂಬರ್ 19) ರಿಂದ 30ರವರೆಗೆ ನಡೆಯಲಿದೆ. ಸಾಕಷ್ಟು ಮಹತ್ವದ ಚರ್ಚೆಗೆ ಸಮಯ ನೀಡಬೇಕಿರುವ ಹಿನ್ನೆಲೆ ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿಯನ್ನು ಸೀಮಿತಗೊಳಿಸಲಾಗಿದೆ.
ಪರಿಷತ್ ಸದಸ್ಯರು ಈ ಮಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು. ವಿಧಾನ ಪರಿಷತ್ ಸದಸ್ಯರು 1,452 ಪ್ರಶ್ನೆಗಳನ್ನು ಕೇಳಿದ್ದು, ಅವುಗಳನ್ನು 150ಕ್ಕೆ ಸೀಮಿತಗೊಳಿಸಲಾಗಿದೆ. 902 ಚುಕ್ಕೆ ರಹಿತ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗುವುದು ಎಂದು ಸುವರ್ಣ ಸೌಧದಲ್ಲಿ ಭಾನುವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ಈ ಸಾರಿ 127 ಗಮನ ಸೆಳೆಯುವ ಸೂಚನೆ ಮಂಡಿಸಲಾಗಿದೆ. ಸಲ್ಲಿಕೆಯಾದ 330 ಅರ್ಜಿಗಳಲ್ಲಿ 51 ಅರ್ಜಿಗಳು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿವೆ. ಸಮಯದ ಲಭ್ಯತೆ ನೋಡಿ ಚರ್ಚಿಸಲಾಗುವುದು ಎಂದರು. ಎರಡು ಖಾಸಗಿ ವಿಧೇಯಕಗಳನ್ನು ಸದಸ್ಯರಾದ ರವಿಕುಮಾರ್ ಹಾಗೂ ವೆಂಕಟೇಶ್ ಮಂಡಿಸಲು ಅರ್ಜಿ ಸಲ್ಲಿಸಿದ್ದು, ಪರಿಶೀಲಿಸಲಾಗುವುದು. ಇದುವರೆಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದೂ ಅವರು ಹೇಳಿದರು.
ಡಿಸೆಂಬರ್ 21ರಂದು ವಿಧಾನ ಪರಿಷತ್ ಸಭಾಪತಿ ಅವಧಿ ಮುಗಿಯಲಿದೆ. ಹೀಗಾಗಿ, ಡಿ.20ರ ಮಧ್ಯಾಹ್ನ 12ರವರಗೆ ನಾಮ ನಿರ್ದೇಶನಕ್ಕೆ ಅವಕಾಶ ಇದೆ. ನಾನು ಈಗಲೂ ಸಭಾಪತಿ ಸ್ಥಾನದಲ್ಲಿರುವ ಕಾರಣ ನನ್ನ ಸ್ಪರ್ಧೆ ಬಗ್ಗೆ ಹೇಳಲಾರೆ ಎಂದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಕೆ ನಿರೀಕ್ಷೆ ಇರಲಿಲ್ಲ: ಸತೀಶ್ ಜಾರಕಿಹೊಳಿ