ಬೆಳಗಾವಿ: ಹೈಕಮಾಂಡ್ ಹೇಳಿದ ನಾಯಕರ ಜೊತೆ ನಾವು ಇರ್ತೀವಿ. ಅದು ಯಡಿಯೂರಪ್ಪ ಇರಬಹುದು ಅಥವಾ ಬೇರೆ ನಾಯಕರೇ ಇರಬಹುದು. ನಾನು ಯಾರ ಪರವಾಗಿಯೂ ಇಲ್ಲ. ಯಾರ ವಿರೋಧವಾಗಿಯೂ ಇಲ್ಲ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬಗ್ಗೆ ಹೈಕಮಾಂಡ್ ನಿರ್ಣಯ ಕೈಗೊಳ್ಳಲಿದೆ. ನಾನು ಯಾರ ಪರವಾಗಿಯೂ ಇಲ್ಲ. ಯಾರ ವಿರೋಧವಾಗಿಯೂ ಇಲ್ಲ. ಹೈಕಮಾಂಡ್ ಹೇಳಿದ ನಾಯಕರ ಜೊತೆ ನಾವು ಇರ್ತೀವಿ. ಅದು ಯಡಿಯೂರಪ್ಪ ಇರಬಹುದು ಅಥವಾ ಬೇರೆ ನಾಯಕರೂ ಇರಬಹುದು. ಬಿಜೆಪಿ ಹೈಕಮಾಂಡ್ ಬಹಳ ಸ್ಟ್ರಾಂಗ್ ಇದ್ದು ನಿರ್ಣಯ ಕೈಗೊಳ್ಳುವ ಶಕ್ತಿ ಇದೆ ಎನ್ನುವ ಮೂಲಕ ಇಷ್ಟು ದಿನ ಯಡಿಯೂರಪ್ಪ ನಾಯಕತ್ವದಲ್ಲಿ ಮುಂದುವರಿತೀವಿ ಅಂತಿದ್ದ ಅನಿಲ್ ಬೆನಕೆ ನಿಲುವು ಬದಲಿಸಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಬಿಜೆಪಿ ಶಾಸಕರ ಸಭೆ ವಿಚಾರಕ್ಕೆ, ನಾನು ಬೆಂಗಳೂರಿಗೆ ಹೋಗುವ ಪ್ರಶ್ನೆಯೇ ಇಲ್ಲ. ಬೆಳಗಾವಿಯಲ್ಲಿ ಸದ್ಯ ಸೋಮವಾರವರೆಗೂ ಲಾಕ್‌ಡೌನ್ ಕಂಟಿನ್ಯೂ ಇದೆ. ಭಾರತೀಯ ಜನತಾ ಪಾರ್ಟಿಗೆ ಒಂದು ಹೈಕಮಾಂಡ್ ಇದೆ. ಭಿನ್ನಾಭಿಪ್ರಾಯ ಇದ್ದರೆ ನೇರವಾಗಿ ಹೈಕಮಾಂಡ್ ಬಳಿ ಹೋಗಬೇಕು. ಅದನ್ನು ಬಿಟ್ಟು ಭಿನ್ನಮತ ವ್ಯಕ್ತಪಡಿಸೋದು ತಪ್ಪು. ಅನುದಾನ ಎಲ್ಲರಿಗೂ ಸಿಗ್ತಿದೆ. ಆದ್ರೆ ಕಡಿಮೆ ಸಿಗ್ತಿದೆ. ಪ್ರವಾಹ ಬಂದಿತ್ತು, ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಅನುದಾನ ಕಡಿಮೆ ಬರುತ್ತಿರಬಹುದು ಹಾಗಾಗಿ ಎಲ್ಲ ಶಾಸಕರಿಗೂ ಕಡಿಮೆ ಅನುದಾನ ಸಿಗ್ತಿದೆ. ಇನ್ನು ಅನುದಾನ ವಿಚಾರದಲ್ಲಿ ತಾರತಮ್ಯ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಇಲಾಖೆಯಲ್ಲಿ ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಆರೋಪ ವಿಚಾರಕ್ಕೆ, ತಾವು ಹಸ್ತಕ್ಷೇಪ ಮಾಡಲ್ಲ ಅಂತಾ ಈಗಾಗಲೇ ವಿಜಯೇಂದ್ರ ಹೇಳಿದ್ದಾರೆ. ಸಿಎಂ ಬಿಎಸ್‌ವೈಗೆ ಸಹಾಯ ಮಾಡ್ತೀವಿ ಅಂತಾ ಹೇಳ್ತಿದ್ದಾರೆ. ವಿಜಯೇಂದ್ರ ಹಸ್ತಕ್ಷೇಪ ಮಾಡ್ತಿದ್ದಾರೆ ಅಂತಾ ನನಗೇನೂ ಅನಿಸಲ್ಲ. ಬೆಳಗಾವಿ ಶಾಸಕರು ಶಾಣೆ ಅದಾರ, ಇಡೀ ರಾಜ್ಯದಲ್ಲಿ ಬೆಳಗಾವಿ ಶಾಸಕರ ಬಗ್ಗೆ ಬಹಳ ಚರ್ಚೆಯಾಗುತ್ತದೆ. ರಾಜ್ಯದ ಎಲ್ಲಾ ಶಾಸಕರು ಪ್ರಜ್ಞಾವಂತರಿದ್ದಾರೆ. ವಿಶೇಷವಾಗಿ ಬೆಳಗಾವಿ ಶಾಸಕರು ಡಿಸೈಡಿಂಗ್ ಇರ್ತೇವೆ. ಅಭಯ್ ಪಾಟೀಲ್ ಬೇರೊಂದು ಕಮಿಟಿ ಮೀಟಿಂಗ್‌ಗಾಗಿ ಬೆಂಗಳೂರಿಗೆ ಹೋಗಿದ್ದಾರೆ. ಶಾಸಕರ ಸಭೆಗಾಗಿ ಅಭಯ್ ಪಾಟೀಲ್ ಬೆಂಗಳೂರಿಗೆ ಹೋಗಿಲ್ಲ ಎಂದರು.