ಬೆಳಗಾವಿ: ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸಿದ್ದರು. ಅವರನ್ನು ಜಿಲ್ಲೆಯ ಬಿಜೆಪಿ ಮುಖಂಡರು ಹೂಗುಚ್ಛ ನೀಡಿ ಸ್ವಾಗತಿಸಿದರು.
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕ ಅಭಯ್ ಪಾಟೀಲ, ಅನಿಲ ಬೆನಕೆ, ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ ಕರಕುಣಿ ಸೇರಿದಂತೆ ಬಿಜೆಪಿ ಮುಖಂಡರು ಅಮಿತ್ ಶಾ ಅವರನ್ನು ಬರಮಾಡಿಕೊಂಡರು.
ಈ ವೇಳೆ ಬಿಜೆಪಿ ಚುನಾವಣೆಗೆ ನಡೆಸಿರುವ ಸಿದ್ಧತೆ ಬಗ್ಗೆ ಶಾ ಮುಖಂಡರಿಂದ ಮಾಹಿತಿ ಪಡೆದರು. ಬಳಿಕ ಬೆಳಗಾವಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸಾಂಗ್ಲಿಗೆ ಅಮಿತ್ ಶಾ ಪ್ರಯಾಣ ಬೆಳೆಸಿದರು.
ಸಾಂಗ್ಲಿಯಲ್ಲಿ ನಡೆಯುವ ಬಿಜೆಪಿ ಪ್ರಚಾರ ಸಭೆ ಬಳಿಕ ಶಾ ಮತ್ತೆ ಬೆಳಗಾವಿಗೆ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜೈನ ಮುಖಂಡರ ಜತೆ ಸಭೆ ನಡೆಸಲಿದ್ದಾರೆ. ಬಳಿಕ ವಿಮಾನದ ಮೂಲಕ ಅವರು ದೆಹಲಿಗೆ ಹಿಂದಿರುಗಲಿದ್ದಾರೆ.