ಬೆಳಗಾವಿ : ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಜಾಗ ಒತ್ತುವರಿ ಆರೋಪದ ಮೇಲೆ ವರ್ಷದ ಹಿಂದಷ್ಟೇ ಕಟ್ಟಿದ್ದ ಮನೆಯನ್ನು ಜೆಸಿಬಿ ಮೂಲಕ ಕೆಡವಿ ಹಾಕಲಾಗಿದೆ. ಈಗ ಆ ಕುಟುಂಬ ದಿಕ್ಕು ತೋಚದೇ ಡಿಸಿ ಕಚೇರಿ ಮೆಟ್ಟಿಲೇರಿದ್ದು, ನ್ಯಾಯ ನೀಡುವಂತೆ ಕಣ್ಣೀರಿಡುತ್ತಿದ್ದಾರೆ.
ಈ ಕುಟುಂಬದ ಹಿರಿಯ ಕಟಿಂಗ್ ಮಾಡಿಕೊಂಡು ಮೂರು ಮಕ್ಕಳನ್ನ ಬೆಳೆಸಿದ್ದಾನೆ. ಮೂವರು ಮಕ್ಕಳು ಬೆಂಗಳೂರಿನಲ್ಲಿ ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡಿ ಕಷ್ಟಪಟ್ಟು ದುಡಿದು 32ಲಕ್ಷ ಖರ್ಚು ಮಾಡಿ ಮನೆ ಕಟ್ಟಿಕೊಂಡಿದ್ದರು. ಊರ ಹೊರಗಿನ ಜಾಗ ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ಈಗ ಅವರ ಮನೆ ಮೇಲೆ ಜೆಸಿಬಿ ಘರ್ಜಿಸಿವೆ.
ಮನೆಯ ಮಾಲೀಕನ ಹೆಸರು ರಾಮಣ್ಣ ದೊಡ್ಡಮನಿ, ಕಳೆದ ವರ್ಷವಷ್ಟೇ ಮನೆ ನಿರ್ಮಾಣ ಮಾಡಿದ್ದರು. ಮೂರು ಮಕ್ಕಳಿದ್ದು ಅವರ ಮದುವೆ ಮಾಡಬೇಕು ಅಂತಾ ಮನೆ ಕಟ್ಟಿ ಹೆಣ್ಣು ನೋಡುವ ಕೆಲಸ ಕೂಡ ಮಾಡುತ್ತಿದ್ದರು. ಆದರೆ, ಇದೀಗ ಗ್ರಾಮ ಪಂಚಾಯತ್ನಲ್ಲಿ ಠರಾವು ಪಾಸ್ ಮಾಡಿ ಕಷ್ಟಪಟ್ಟು ನಿರ್ಮಿಸಿದ್ದ 32ಲಕ್ಷ ಮೌಲ್ಯದ ಮನೆಯನ್ನ ಕೆಡವಿದ್ದಾರೆ.
ಒಂದು ಗುಂಟೆ ಜಾಗದಲ್ಲಿ ನಿರ್ಮಾಣವಾದ ಜಾಗ ತನ್ನದು ಎಂದು ಮನೆ ಮಾಲೀಕ ರಾಮಣ್ಣ ಹೇಳುತ್ತಿದ್ದರೆ, ಇತ್ತ ಗ್ರಾಮ ಪಂಚಾಯತ್ನವರು ಅವರು ಇದು ಸರ್ಕಾರಿ ಜಮೀನು ಅಂತಾ ಹೇಳುತ್ತಿದ್ದಾರೆ. ಈ ಇಬ್ಬರ ನಡುವಿನ ಗುದ್ದಾಟದಿಂದ ಇಂದು ಸುಂದರಾಗಿ ನಿರ್ಮಿಸಿದ್ದ ಮನೆಯೇ ನೆಲಸಮವಾಗಿದೆ. ಹೀಗಾಗಿ ರಾಮಣ್ಣ ಕುಟುಂಬ ಬೀದಿಗೆ ಬಂದಿದೆ.
ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪಿಡಿಒ ದೌರ್ಜನ್ಯ ಮಾಡಿದ್ದಾರೆ ಅಂತಾ ಆರೋಪಿಸಿ ಜಿಲ್ಲಾ ಪಂಚಾಯತ್ ಕಚೇರಿಗೆ ಬಂದು ಇಡೀ ಕುಟುಂಬ ಧರಣಿ ನಡೆಸಿದೆ. ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಮುಂದೆ ತಮಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು ಬೇಡಿಕೊಂಡರು. ಡಿಸಿ ಕೂಡ ಅವರ ಮನವಿಯನ್ನ ಸ್ವೀಕರಿಸಿ, ಈ ಕುರಿತು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದರು. ನಂತರ ಕುಟುಂಬಸ್ಥರು ಧರಣಿಯನ್ನ ವಾಪಸ್ ಪಡೆದರು.
ರಾಮಣ್ಣ ಈಗ ಕಟ್ಟಿರುವ ಜಾಗ ತನ್ನ ಪಿತ್ರಾರ್ಜಿತ ಆಸ್ತಿ ಎಂದು ಹೇಳುತ್ತಿದ್ದಾರೆ. ಆದ್ರೇ ಸ್ಥಳೀಯ ಗ್ರಾಮ ಪಂಚಾಯತ್ನಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ, ರಾಮಣ್ಣ ಬಳಿ ಕೂಡ 1984ರಲ್ಲಿನ ಕೈಯಿಂದ ಬರೆದ ಪಹಣಿ ಇದ್ದು, ಸರಿಯಾದ ದಾಖಲೆಗಳಿಲ್ಲ. ಇತ್ತ ಗ್ರಾ.ಪಂ. ಎರಡು ಬಾರಿ ನೋಟಿಸ್ ನೀಡಿ ಜಾಗದ ದಾಖಲೆಗಳನ್ನ ಕೇಳಿದ್ದಾರೆ. ಜತೆಗೆ ಮನೆ ಡೆಮಾಲಿಶ್ ಮಾಡುವುದಾಗಿ ಕೂಡ ವಾರ್ನ್ ಮಾಡಿದ್ದರಂತೆ. ಇಷ್ಟಾದರೂ ಈತ ದಾಖಲೆ ನೀಡರಲಿಲ್ಲವಂತೆ.
ಮತ್ತೊಂದೆಡೆ ಗ್ರಾಮ ಪಂಚಾಯತ್ನಲ್ಲಿ ದಾಖಲೆ ತೆಗೆದು ನೋಡಿದಾಗ ರಾಮಣ್ಣ ಮನೆ ಕಟ್ಟಿದ ಸುತ್ತಮುತ್ತಲಿನ ಜಾಗ ಸೇರಿ 35ಗುಂಟೆ ಸರ್ಕಾರಕ್ಕೆ ಸೇರಿದ ಜಾಗವಿದೆ. ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದ್ದಾನೆ ಅಂತಾ ಪಂಚಾಯತ್ನಲ್ಲಿ ಠರಾವು ಪಾಸ್ ಮಾಡಿ ಎರಡು ಬಾರಿ ನೋಟಿಸ್ ನೀಡಿ ಮನೆ ಬೀಳಿಸಲಾಗಿದೆ.
ಈ ಕುರಿತು ಗೋಕಾಕ್ ತಹಶೀಲ್ದಾರ್ ಪ್ರಕಾಶ್ ಪ್ರತಿಕ್ರಿಯಿಸಿದ್ದು, ಸ್ಥಳೀಯ ಪಿಡಿಒ ಬಳಿಯಿಂದ ಮಾಹಿತಿ ಪಡೆದಿದ್ದೇನೆ. ಅದು ಸರ್ಕಾರಿ ಜಮೀನಾಗಿದ್ದು, ಅದನ್ನ ಒತ್ತುವರಿ ಮಾಡಿಕೊಂಡಿದ್ದರಂತೆ. ಎರಡು ಬಾರಿ ನೋಟಿಸ್ ನೀಡಿ ಮನೆ ಡೆಮಾಲಿಶ್ ಮಾಡಿದ್ದಾರೆ. ಅವರ ಬಳಿ ಯಾವುದೇ ದಾಖಲೆ ಇಲ್ಲದ್ದಕ್ಕೆ ಅವರು ಕೋರ್ಟ್ ಗೆ ಹೋಗಿಲ್ಲ ಎಂದು ಮಾಹಿತಿ ನೀಡಿದರು.