ಬೆಳಗಾವಿ: ಕಳೆದ 5 ದಿನಗಳ ಹಿಂದೆ ದಾಖಲಾಗಿದ್ದ ಕಳ್ಳತನ ಪ್ರಕರಣವೊಂದನ್ನು ಬೇಧಿಸಿದ ಸಂಕೇಶ್ವರ ಪೋಲಿಸರು, ಕಳ್ಳರನ್ನು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ಸಿಬಿಎಸ್ಸಿ ಶಾಲೆಯ ಆಫೀಸ್ ಬಾಗಿಲು ತೆಗೆದು ಟ್ರೆಜರಿ ಲಾಕರ್ ಮುರಿದು ಅದರಲ್ಲಿ ಇದ್ದ 3,20,000 ರೂ. ಹಣ ಕಳ್ಳತನ ಮಾಡಿದ್ದಾರೆ ಎಂದು ಜೂನ್ 30ರಂದು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ದಿನೇಶ ನಾಗಪ್ಪ ಮುತ್ನಾಳೆ (19) ಹಾಗೂ ಹುಕ್ಕೇರಿ ತಾಲೂಕಿನ ನೇರಲಿ ಗ್ರಾಮದ ಗಿರೀಶ ಬಸವರಾಜ ಅವಾಂತಕರ (20) ಬಂಧಿತ ಆರೋಪಿಗಳು. ಪ್ರಕರಣ ದಾಖಲಾದ ಐದು ದಿನದೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಬಂಧಿತರಿಂದ 2,50,000 ರೂ. ನಗದು, 50,000 ಮೌಲ್ಯದ ಮೂರು ಮೊಬೈಲ್ ಹಾಗೂ ಕಳ್ಳತನ ಮಾಡಲು ಬಳಿಸಿದ್ದ 1,00,000 ಮೌಲ್ಯದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.