ಬೆಳಗಾವಿ: ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಉಕ್ರೇನಿನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾಧಿಕಾರಿಗಳು ಈಗಷ್ಟೇ ವಿದ್ಯಾರ್ಥಿನಿಯರ ಮಾಹಿತಿ ನೀಡಿದ್ದಾರೆ. ಉಕ್ರೇನಿನಲ್ಲಿರುವ ಭಾರತೀಯರು ದೇಶಕ್ಕೆ ಮರಳುವಂತೆ ನಾಲ್ಕು ದಿನಗಳ ಹಿಂದೆಯೇ ಕೇಂದ್ರ ಸರ್ಕಾರ ಕೋರಿತ್ತು. ಉಕ್ರೇನಿನಲ್ಲಿ ಸ್ಥಿತಿಗತಿ ಸರಿಯಿಲ್ಲ ಎಂದು ಭಾರತೀಯರಿಗೆ ಕೇಂದ್ರ ಸರ್ಕಾರ ಮನವರಿಕೆ ಮಾಡಿತ್ತು. ವ್ಯಾಸಂಗಕ್ಕೆ ಹೋಗಿದ್ದ ಕೆಲ ವಿದ್ಯಾರ್ಥಿನಿಯರು ಈಗಾಗಲೇ ದೇಶಕ್ಕೆ ಮರಳಿದ್ದಾರೆ. ಉಳಿದವರನ್ನು ದೇಶಕ್ಕೆ ಕರೆತರಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿದ ವಿಜಯಪುರದ MBBS ವಿದ್ಯಾರ್ಥಿನಿ
ಈಗಾಗಲೇ ಕುಟುಂಬಸ್ಥರ ಜೊತೆಗೆ ಜಿಲ್ಲಾಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಉಕ್ರೇನಿನಿಂದ ಭಾರತಕ್ಕೆ ಬರಲು ವಿಮಾನಗಳು ಸಿಗುತ್ತಿಲ್ಲ. ವಿಮಾನ ಸೌಲಭ್ಯ ಒದಗಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೂ ಮನವಿ ಮಾಡುತ್ತೇನೆ. ಎಲ್ಲ ದೇಶಗಳ ವಿಮಾನಗಳು ಬರುತ್ತಿರುವ ಕಾರಣ ಅಲ್ಲಿ ಲ್ಯಾಂಡಿಂಗ್ ಸಮಸ್ಯೆ ಆಗುತ್ತಿದೆ ಎಂದರು.
ವಿದ್ಯಾರ್ಥಿನಿಯರು ಸುರಕ್ಷಿತರಾಗಿದ್ದಾರೆ: ಡಿಸಿ ಹಿರೇಮಠ
ಉಕ್ರೇನಿನನಲ್ಲಿ ಸಿಲುಕಿಕೊಂಡಿರುವ ಬೆಳಗಾವಿಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಸುರಕ್ಷಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಅಮೋಘಾ ಚೌಗಲಾ ಹಾಗೂ ಪ್ರಿಯಾ ನಿಡಗುಂದಿ ಉಕ್ರೇನಿನಲ್ಲಿ ಸಿಲುಕಿಕೊಂಡಿದ್ದಾರೆ. ಪೋಷಕರೇ ಮೇಲ್ ಮಾಡಿ ನನಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯರ ಪೋಷಕರ ಜೊತೆಗೆ ನಾನು ಮಾತನಾಡಿದ್ದೇನೆ. ವಿದ್ಯಾರ್ಥಿನಿಯರ ಜೊತೆಗೆ ಸಂಪರ್ಕದಲ್ಲಿರುವುದಾಗಿ ಪೋಷಕರು ತಿಳಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಉಕ್ರೇನಿನಲ್ಲಿ ಸುರಕ್ಷಿತರಾಗಿದ್ದಾರೆ ಎಂದರು.
ಫೆ. 26 ಕ್ಕೆ ವಿದ್ಯಾರ್ಥಿನಿಯರ ವಿಮಾನ ಟಿಕೆಟ್ ಬುಕ್ ಆಗಿದೆ. ವಿದೇಶಾಂಗ ಇಲಾಖೆಗೆ ಮೇಲ್ ಮೂಲಕ ವಿದ್ಯಾರ್ಥಿನಿಯರ ಮಾಹಿತಿ ನೀಡಿದ್ದೇವೆ. ವಿದ್ಯಾರ್ಥಿನಿಯರಿಗೆ ಏನೂ ತೊಂದರೆ ಇಲ್ಲ, ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.