ಬೆಳಗಾವಿ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದರು. ಕಟ್ಟಡ ಕಾರ್ಮಿಕರ ಕಳೆದ ಎರಡೂ ವರ್ಷಗಳಿಂದ ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಿ ಪ್ರಸಕ್ತ ಸಾಲಿನ ಶೈಕ್ಷಣಿಕ ಸಹಾಯ ಧನದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಬೇಕು.
ಅರ್ಹ ಕಾರ್ಮಿಕನಿಗೆ ಪಿಂಚಣಿಗಾಗಿ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವನ್ನು ತೆಗೆದು ಹಾಕಿ ಮೊದಲ ಬಾರಿಗೆ ಕಂದಾಯ ಅಧಿಕಾರಿಗಳು ಜೀವಿತ ಪ್ರಮಾಣ ಪತ್ರ ನೀಡಿದ ಬಳಿಕ ಮುಂದಿನ ವರ್ಷಗಳಲ್ಲಿ ಕಾರ್ಮಿಕ ಇಲಾಖೆಯಿಂದಲೇ ಜೀವಿತ ಪ್ರಮಾಣ ಪತ್ರ ನೀಡಬೇಕು. ಬೇರೆ ಯಾವುದೇ ಪಿಂಚಣಿ ಪಡೆದಿದ್ದರೂ ಈ ಪಿಂಚಣಿಯಲ್ಲಿ ನಿಲ್ಲಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಎ.ದೇವದಾಸ್ ಈಟಿವಿ ಭಾರತ ಜೊತೆಗೆ ಮಾತನಾಡಿ, ಬಾಕಿ ಇರುವ ಸಹಾಯಧನವನ್ನು ಈ ಕೂಡಲೇ ಕಾರ್ಮಿಕರ ಖಾತೆಗೆ ಜಮೆ ಮಾಡಬೇಕು. 5 ಲಕ್ಷ ರೂ.ಗಳ ನಗದು ರಹಿತ ಆರೋಗ್ಯ ಸೇವೆಯನ್ನು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ತತಕ್ಷಣ ಜಾರಿಗೊಳಿಸಬೇಕು. ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಾಣಕ್ಕೆ ಮಂಡಳಿಯೂ 5 ಲಕ್ಷ ರೂ. ಸಹಾಯಧನ ನೀಡಬೇಕು. ಮಂಡಳಿಯ ಸದಸ್ಯತ್ವ ನವೀಕರಣ ಅವಧಿಯನ್ನು ಕೇವಲ ಒಂದು ವರ್ಷಕ್ಕೆ ಇಳಿಸಿರುವ ನಿರ್ಧಾರವನ್ನು ಕೈ ಬಿಡಬೇಕು.
ಸ್ಲಂ ಬೋಡ್೯ಗೆ ನೀಡಿದ 518 ಕೋಟಿ ರೂ. ಮಂಡಳಿಯ ಹಣವನ್ನು ವಾಪಸ್ ಪಡೆಯಬೇಕು ಹಾಗೂ ಅವಶ್ಯಕತೆ ಇರುವ ಮಕ್ಕಳಿಗೆ ಮಾತ್ರ ಲ್ಯಾಪ್ ಟಾಪ್ ಖರೀದಿಸಲು ಡಿಬಿಟಿ ಮೂಲಕ ಸಹಾಯಧನ ನೀಡಿ ಅವಶ್ಯವಿರುವ ಕಾರ್ಮಿಕರಿಗೆ ಟೂಲ್ ಕಿಟ್ ಖರೀದಿಸಲು ಡಿಬಿಟಿ ಮೂಲಕ ಸಹಾಯ ಧನ ನೀಡಬೇಕು. ಇಲ್ಲಿಯವರೆಗೆ ವಿವಿಧ ಕಿಟ್ ಗಳು, ಲ್ಯಾಪ್ ಟಾಪ್ ಖರೀದಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಮಾತನಾಡಿ, ಬೋಗಸ್ ಕಾರ್ಡುಗಳನ್ನು ಪತ್ತೆ ಹೆಚ್ಚಿ ರದ್ದು ಮಾಡಿ, ನೋಂದಣಿಯನ್ನು ಈ ಹಿಂದೆ ಇದ್ದಂತೆ ಕಾರ್ಮಿಕ ಸಂಘಟನೆ ಗಣನೆಗೆ ತೆಗೆದುಕೊಂಡು, ಕಾರ್ಮಿಕ ಇಲಾಖೆಯ ಮೂಲಕ ಮಾತ್ರ ಮಾಡುವ ಕ್ರಮ ಜಾರಿಗೆ ತರಬೇಕು ಮತ್ತು ಅಪಘಾತದಲ್ಲಿ ಜೀವ ಕಳೆದುಕೊಂಡ ಕಾರ್ಮಿಕರ ಕುಟುಂಬಕ್ಕೆ ಸರಕಾರ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ದುಡಿಯುವ ಸಾಮರ್ಥ್ಯ ಕಳೆದುಕೊಂಡ ಕುಟುಂಬಗಳಿಗೆ 10 ಲಕ್ಷ ಪರಿಹಾರ ಹಾಗೂ ಜೀವನ ಯೋಗ್ಯ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಬಳಿಕ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಕಾರ್ಮಿಕ ಸಚಿವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಈ ವೇಳೆ, ಕಟ್ಟಡ ಕಾರ್ಮಿಕರ ಸಂಘ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್, ಜಿಲ್ಲಾ ಸಂಘಟಕ ರಾಜು ಗಾಣಗಿ, ಸತ್ಯಪ್ಪ, ಅಮಿತ್ ಹಕಾಟೆ, ಅರ್ಜುನ ಮ್ಯಾಗಳಕೇರಿ ಸೇರಿದಂತೆ ಇನ್ನಿತರರು ಇದ್ದರು.
ಇದನ್ನೂ ಓದಿ: ಕಾವೇರಿಗಾಗಿ ಭಿಕ್ಷಾ ಪಾತ್ರೆ ಹಿಡಿದು ರಕ್ಷಣಾವೇದಿಕೆಯಿಂದ ವಿಶೇಷ ಪ್ರತಿಭಟನೆ