ಚಿಕ್ಕೋಡಿ (ಬೆಳಗಾವಿ): ಜೂನ್ ತಿಂಗಳು ಮುಗಿದರೂ ಮಳೆ ಮಾತ್ರ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಬರದ ಛಾಯೆ ಆವರಿಸಿ ಹಲವು ಜಿಲ್ಲೆಯಲ್ಲಿ ಬಹುತೇಕ ನದಿಗಳು ಬತ್ತಿ ಹೋಗಿವೆ. ಮಳೆಯಾಗದೇ ಇರುವುದರಿಂದ ಉತ್ತರ ಕರ್ನಾಟಕದ ಬಹುತೇಕ ಡ್ಯಾಂಗಳು ಖಾಲಿಖಾಲಿಯಾಗಿ ಗೋಚರಿಸುತ್ತಿವೆ. ಹಾಗೇ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ನೀರು ಖಾಲಿಯಾಗಿದ್ದು, ಬರೋಬ್ಬರಿ 12 ವರ್ಷಗಳ ನಂತರ ಪುರಾತನ ದೇವಸ್ಥಾನವೊಂದು ದರ್ಶನಕ್ಕೆ ಮುಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಸದ್ಯ ಸಂಪೂರ್ಣ ಖಾಲಿಯಾಗಿದೆ. ಹಿಡಕಲ್ ಜಲಾಶಯವೂ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ. ಹೀಗಾಗಿ ಡ್ಯಾಂನ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ವಿಠ್ಠಲ ದೇವಸ್ಥಾನವು ಭಕ್ತರ ದರ್ಶನಕ್ಕೆ ಮುಕ್ತವಾಗಿದ್ದು, ಆಷಾಢ ಏಕಾದಶಿಯಂದು ವಿಠ್ಠಲನ ದರ್ಶನ ಪಡೆದು ಭಕ್ತರು ಪುಳಕೀತರಾದರು.
ಕಳೆದ 12 ವರ್ಷಗಳ ಬಳಿಕ ವಿಠ್ಠಲನ ಈ ದೇವಸ್ಥಾನವು ಸಂಪೂರ್ಣವಾಗಿ ಕಾಣಿಸಿಕೊಂಡಿದೆ. 1928ರಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಆದ್ರೆ 1977ನೇ ಇಸವಿಯಲ್ಲಿ ಹಿಡಕಲ್ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ವಿಠ್ಠಲ ದೇವಸ್ಥಾನವು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಅದಾದ ಬಳಿಕ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಂತಹ ಸಂದರ್ಭಗಳಲ್ಲಿ ಮಾತ್ರ ಈ ದೇವಸ್ಥಾನವು ಕಾಣಸಿಗುತ್ತದೆ.
ವರ್ಷದ 10 ತಿಂಗಳುಗಳಲ್ಲಿ ಈ ದೇವಸ್ಥಾನವು ನೀರಿನಲ್ಲಿ ಮುಳುಗಡೆಯಾಗಿರುತ್ತದೆ. ಕೇವಲ ಎರಡು ತಿಂಗಳು ಮಾತ್ರ ದೂರದಿಂದ ನೋಡಿದ್ರೆ ಅರ್ಧದಷ್ಟು ಮಾತ್ರ ದೇವಸ್ಥಾನ ಕಾಣಸಿಗುತ್ತದೆ, ವಿಠ್ಠಲ ದೇವಸ್ಥಾನವನ್ನು ಸಂಪೂರ್ಣ ಕಲ್ಲಿನಲ್ಲಿಯೇ ನಿರ್ಮಿಸಿರುವುದು ವಿಶೇಷ.
ಕಳೆದ 12 ವರ್ಷಗಳ ಹಿಂದೆ ಈ ದೇವಸ್ಥಾನವು ಕಂಡಿತ್ತು, ಇದೀಗ ಹಿಡಕಲ್ ಡ್ಯಾಂ ಸಂಪೂರ್ಣ ಖಾಲಿಯಾಗಿರುವುದರಿಂದ ವಿಠ್ಠಲ ದೇವಸ್ಥಾನವನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ದಿನನಿತ್ಯವೂ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ನಿನ್ನೆ ಆಷಾಢ ಏಕಾದಶಿ ಇದ್ದುದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ದೇವರ ದರ್ಶನಕ್ಕೆ ಬಂದ ಭಕ್ತರು ಮಾತನಾಡಿ, ಈ ದೇವಾಲಯ ಇತಿಹಾಸ ಪರಂಪರೆಯನ್ನು ಹೊಂದಿದೆ. ನೊಂದು ಬೆಂದವರಿಗೆ ಈ ದೇವರು ದಾರಿಯನ್ನು ತೋರಿಸುತ್ತಾರೆ. ಇಲ್ಲಿ ಹಲವಾರು ಪವಾಡಗಳು ನಡೆಯುತ್ತವೆ. ಕಳೆದ 12 ವರ್ಷಗಳಿಂದ ನೀರಲ್ಲಿ ಮುಳುಗಿದರೂ ದೇವಾಲಯಕ್ಕೆ ಒಂದು ಸಣ್ಣ ಹಾನಿ ಕೂಡ ಆಗಿಲ್ಲ. ನಾವು ನೀರಿನಲ್ಲಿ ಇದ್ದಾಗ ದೇವರಿಗೆ ಕಂಬಳಿಯನ್ನು ಹೊದಿಸಿ ಹೋಗುತ್ತೇವೆ. ನಂತರ ಪ್ರತಿ ವರ್ಷ ನೀರು ಕಡಿಮೆಯಾದಾಗ ಬಂದು ಮತ್ತೆ ಹೊಸ ಕಂಬಳಿಯನ್ನು ಹಾಕುತ್ತೇವೆ ಎಂದರು.
ಮತ್ತೊಬ್ಬ ಭಕ್ತರು ಮಾತನಾಡಿ, ಈವರೆಗೆ ಹಳೆ ಕಂಬಳಿಗೆ ಯಾವುದೇ ಹಾನಿ ಆಗಿಲ್ಲ. ಇದು ಒಂದು ಪವಿತ್ರ ಕ್ಷೇತ್ರವಾಗಿದ್ದು, ದಿನನಿತ್ಯ ಸಾವಿರಾರು ಭಕ್ತರು ದೇವರ ದರ್ಶನನ್ನು ಪಡೆದುಕೊಂಡು ಹೋಗುತ್ತಾರೆ. ನೀರಿನಲ್ಲಿ ಇರುವುದರಿಂದ ದೂರಿನಿಂದ ಭಕ್ತರ ದೇವರ ದರ್ಶನ ಪಡೆಯುತ್ತಾರೆ. ಈ ವರ್ಷ ಸಂಪೂರ್ಣವಾಗಿ ನೀರು ಖಾಲಿಯಾಗಿದ್ದರಿಂದ ದೇವರ ದರ್ಶನಕ್ಕೆ ಮುಕ್ತವಾಗಿದೆ ಎಂದು ಹೇಳಿದರು.
ಒಟ್ಟಿನಲ್ಲಿ 12 ವರ್ಷಗಳ ಬಳಿಕ ಡ್ಯಾಂನಲ್ಲಿ ಮುಳುಗಿದ್ದ ವಿಠ್ಠಲ ದೇವಸ್ಥಾನ ಭಕ್ತರ ದರ್ಶನಕ್ಕಾಗಿ ಮುಕ್ತವಾಗಿದೆ. ಜೊತೆಗೆ ಆಷಾಢ ಏಕಾದಶಿದಿನವೇ ವಿಠ್ಠಲನ ದರ್ಶನ ಸಿಕ್ಕಿರುವುದು ಪವಾಡವೇ ಸರಿ ಅಂತಾ ಭಕ್ತರು ವಿಶೇಷ ಪೂಜೆಗಳನ್ನು ನೆರವೇರಿಸಿದರು.
ಓದಿ: ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ರಾಜ್ಯದ ಪ್ರಮುಖ ದೇವಾಲಯಗಳು ಯಾವುವು ಗೊತ್ತೇ?