ಚಿಕ್ಕೋಡಿ: ವೀರಶೈವ-ಲಿಂಗಾಯತ ಉಪ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಬೇಕು. ಆಗ ಮಾತ್ರ ಸಮಾಜಕ್ಕೆ ನ್ಯಾಯ ಸಿಗುತ್ತದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಹೇಳಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಡ್ರಾಂವ ಗ್ರಾಮದ ಶಿವಶಕ್ತಿ ಸಕ್ಕರೆ ಕಾರ್ಖಾನೆಯಲ್ಲಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವ ನಿರ್ಧಾರ ಸ್ವಾಗತಾರ್ಹ. ವೀರಶೈವ-ಲಿಂಗಾಯತ ಸಮಾಜಕ್ಕೆ ಬಹಳಷ್ಟು ಅನ್ಯಾಯವಾಗಿದೆ. ನಿಗಮ ಮಾಡುವುದರ ಮೂಲಕ ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ ಎಂದರು.
ಕೆಲವು ಸ್ವಾಮೀಜಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಮುಖ್ಯಮಂತ್ರಿಗಳಿಗೆ ಎಲ್ಲವೂ ಗೊತ್ತಿದೆ. ಅವರು ಎಲ್ಲವನ್ನೂ ವಿಚಾರ ಮಾಡಿಯೇ ನಿರ್ಧರಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಕೊಟ್ಟಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತಾಡುವ ಹಕ್ಕಿದೆ. ಅವರು ತಮ್ಮ ವಿಚಾರ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ಸಮಾಜಕ್ಕೆ ಅನ್ಯಾಯವಾಗುತ್ತದೆ ಎಂದೆನಿಸುವುದಿಲ್ಲ ಎಂದು ಹೇಳಿದರು.