ಬೆಳಗಾವಿ : ಹಳೆ ವೈಷಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ವ್ಯಕ್ತಿಯೋರ್ವನ ಕೊಲೆ ಮಾಡಿರುವ ಘಟನೆ ಚೆನ್ನಮ್ಮ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ತಿಗಡೊಳ್ಳಿ ಗ್ರಾಮದ ವಿಜಯ್ ರಾಮಚಂದ್ರಪ್ಪ ಆರೇರ್ (35) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ವ್ಯಕ್ತಿಯೊಬ್ಬರ ನಡುವೆ ನಿನ್ನೆ ರಾತ್ರಿ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ತೀವ್ರ ಗಾಯಗೊಂಡಿದ್ದ ವಿಜಯ್ನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ವಿಜಯ್ ಸಾವನ್ನಪ್ಪಿದ್ದಾನೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಹಿನ್ನೆಲೆ : 2011ರಲ್ಲಿ ಈಗ ಕೊಲೆಯಾದ ವಿಜಯ್ ಆರೇರ್ ತಂದೆ ತಾಯಿಯನ್ನು ಕೂಡ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈಗ ಅವರ ಮಗ ವಿಜಯ್ ಹತ್ಯೆ ಆಗಿದೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
2011ರಲ್ಲಿ ವಿಜಯ್ ತಂದೆ-ತಾಯಿಯನ್ನು ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದಲ್ಲಿ ಆರೋಪಿಗಳು ಜೈಲುಪಾಲಾಗಿದ್ದಾರೆ. ಸದ್ಯ ವಿಜಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಆರೋಪಿಗಳನ್ನು ಕಿತ್ತೂರು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ವಿಜಯಪುರ: ಪತ್ನಿ, ಅತ್ತೆ ಕೊಂದು ಪೊಲೀಸರಿಗೆ ಶರಣಾದ ಆರೋಪಿ