ಬೆಳಗಾವಿ : ಪ್ರವಾಹದಲ್ಲಿ ಮುಳುಗಡೆ ಆಗಿರುವ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವುದು ಸರ್ಕಾರದ ಹಂತದಲ್ಲಿ ನಿರ್ಧರಿಸಬೇಕಾಗುತ್ತದೆ. ಪರಿಹಾರ ಕಾರ್ಯ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಡಾ.ರಾಜೇಂದ್ರ ಕೆ.ವ್ಹಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಆರಂಭದಲ್ಲಿ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಮತ್ತು ಜಿಪಂ ಸದಸ್ಯ ಜಿತೇಂದ್ರ ಮಾದರ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಆದರೆ, ಜಿಪಂ ಅಧ್ಯಕ್ಷರು ಏಕೆ ವಿಶೇಷ ಸಭೆ ಕರೆಯಲಿಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ರು. ಸಭೆಯಲ್ಲಿ ಜಿಪಂ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬಳಿಕ ಅಧ್ಯಕ್ಷೆ ಆಶಾ ಐಹೊಳೆ ಅವರು ಸಭೆಯಲ್ಲಿ ನೆರೆ ಹಾನಿ ಕುರಿತು ಚರ್ಚಿಸಲು ಅವಕಾಶ ಮಾಡಿಕೊಟ್ಟರು.
ನಂತರ ಸಭೆಯಲ್ಲಿ ಅಥಣಿಯಲ್ಲಿ ವಿದ್ಯುತ್ ಶಾಕ್ ಅವಗಡದಿಂದ ನೀರಲ್ಲಿ ಬಿದ್ದು ಸಾವನ್ನಪ್ಪಿರುವ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿ ಇನ್ನು ಕೂಡ ಬಂದಿಲ್ಲ ಎಂದು ಸತ್ತಿ ಜಿಪಂ ಸದಸ್ಯ ಸಿದ್ದಪ್ಪ ಮುದಕನ್ನವರ ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಜಿಪಂ ಸಿಇಒ ಡಾ.ರಾಜೇಂದ್ರ ಕೆ.ವ್ಹಿ, ಪ್ರವಾಹದಲ್ಲಿ ದುರ್ಮರಣ ಹೊಂದಿರುವ ವ್ಯಕ್ತಿಗಳ ಕುಟುಂಬಸ್ಥರಿಗೆ 24ಗಂಟೆಗಳಲ್ಲಿ ಮಾನವೀಯ ದೃಷ್ಟಿಯಿಂದ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಬೇಕು ಎಂಬುದಿದೆ. ಆದ್ದರಿಂದ ಮಾನವೀಯ ದೃಷ್ಟಿಯಿಂದ ಪೋಸ್ಟ್ ಮಾರ್ಟಂ ವರದಿ ತರಿಸಿ ಶೀಘ್ರವೇ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.