ಬೆಳಗಾವಿ : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪಕ್ಷಗಳ ಚಿಹ್ನೆ ಮೇಲೆ ನಡೆಯುತ್ತಿದೆ. ಪಾಲಿಕೆ ಚುನಾವಣೆಗೆ ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ ಕೂಡ ಎಂಟ್ರಿ ಕೊಟ್ಟಿದೆ. ದೆಹಲಿ ಸರ್ಕಾರದ ಯೋಜನೆಗಳನ್ನು ನಗರದಲ್ಲಿ ಜಾರಿಗೊಳಿಸುವ ಇಂಗಿತವನ್ನು ಆಪ್ ಮುಖಂಡರು ವ್ಯಕ್ತಪಡಿಸಿದ್ದಾರೆ.
ಆಪ್ ಪಾಲಿಕೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. 58 ವಾರ್ಡ್ ಪೈಕಿ 28 ವಾರ್ಡ್ಗೆ ಸ್ಪರ್ಧಿಸಿರುವ ಆಪ್ ಅಧಿಕಾರಕ್ಕೆ ಬಂದರೆ ಹಲವು ಯೋಜನೆ ಜಾರಿಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.
ನೀರು, ವೈದ್ಯಕೀಯ ಸೇವೆ ಫ್ರೀ : ಆಮ್ ಆದ್ಮಿ ಪಕ್ಷ ಪಾಲಿಕೆಯ ಗದ್ದುಗೆ ಏರಿದರೆ ದೆಹಲಿ ಸರ್ಕಾರದ ಮಾದರಿಯಲ್ಲಿ ಪ್ರತಿ ಮನೆಗೆ 15,000 ಲೀ. ಉಚಿತ ಕುಡಿಯುವ ನೀರು, ಪ್ರತಿ ವಾರ್ಡ್ಗೆ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ, ಮಹಿಳೆಯರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣ, ದೆಹಲಿ ಮಾದರಿ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ, ಉದ್ಯಾನಗಳ ಅಭಿವೃದ್ಧಿ,100 ಆಟೋರಿಕ್ಷಾ ನಿಲ್ದಾಣಗಳ ನಿರ್ಮಾಣ, ಎಲ್ಲ ವಾರ್ಡ್ ಗಳಿಗೆ ಉಚಿತ ವೈಫೈ ಸೌಲಭ್ಯ ಹಾಗೂ ಸಿಸಿ ಕ್ಯಾಮೆರಾಗಳ ಅಳವಡಿಕೆ, ಮನೆ ಮನೆಗೆ ಪಾಲಿಕೆ ಸೇವೆಗಳನ್ನು ಒದಗಿಸುವುದು ಸೇರಿ 26 ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದೆ.
ಬೆಳಗಾವಿಯಲ್ಲಿ ಆಪ್ ಮುಖಂಡರ ಠಿಕಾಣಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಗಂಭೀರವಾಗಿ ಪರಿಗಣಿಸಿರುವ ಆಪ್, ಬೆಂಗಳೂರು ಸೇರಿದಂತೆ ನಾಡಿನ ಹಲವು ಭಾಗಗಳಿಂದ ಇನ್ನೂರಕ್ಕೂ ಅಧಿಕ ಕಾರ್ಯಕರ್ತರು ಬೆಳಗಾವಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಐದು ಜನರನ್ನು ಒಳಗೊಂಡ 40 ತಂಡಗಳು ಅಭ್ಯರ್ಥಿಗಳ ಗೆಲುವಿಗಾಗಿ ತಂತ್ರ ರೂಪಿಸುತ್ತಿದ್ದಾರೆ. ಪ್ರತಿ ಮನೆಮನೆಗೆ ತೆರಳಿ ದೆಹಲಿ ಸರ್ಕಾರದ ಯೋಜನೆಗಳ ಮಾಹಿತಿ ನೀಡಿ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ, ಸಿಗ್ನಲ್ ಗಳಲ್ಲಿ ಪಕ್ಷದ ಪಾಂಪ್ಲೆಟ್ ಹಂಚಿ ಆಪ್ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಟಿಕೆಟ್ ಹಂಚಿಕೆ ವೇಳೆಯೂ ಆಪ್ ಇತರ ಪಕ್ಷಗಳಿಗಿಂತ ಮಾದರಿಯಾಗಿದೆ. ಕ್ರಿಮಿನಲ್ ಹಿನ್ನೆಲೆ ಇಲ್ಲದವರಿಗೆ ಟಿಕೆಟ್ ಹಂಚಿಕೆ ಮಾಡಿದೆ. ಆಪ್ ಕಾರ್ಯಕರ್ತರು ನಗರದಲ್ಲಿ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ.
ಇದನ್ನೂ ಓದಿ : ಮೊದಲ ಬಾರಿಗೆ ಬಿಜೆಪಿಗೆ ಒಲಿದ ಮೇಯರ್ ಪಟ್ಟ.. ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿ